Connect with us

Latest

ನೋಟು ನಿಷೇಧವನ್ನು ಬೆಂಬಲಿಸಿದ್ದ ಶಕ್ತಿಕಾಂತ್ ದಾಸ್ ಮುಂದಿನ ಆರ್‌ಬಿಐ ಗವರ್ನರ್

Published

on

ನವದೆಹಲಿ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರ ಸರ್ಕಾರ ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿದೆ.

ಸೋಮವಾರ ಹುದ್ದಗೆ ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ, ನೋಟು ನಿಷೇಧದ ಸಮಯದಲ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಶಕ್ತಿಕಾಂತ್ ದಾಸ್ ಅವರು ಗವರ್ನರ್ ಹುದ್ದೆಗೆ ಏರಲಿದ್ದಾರೆ.

1980ರಲ್ಲಿ ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಶಕ್ತಿಕಾಂತ್ ದಾಸ್ ಅವರು 37 ವರ್ಷಗಳ ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರ ಸರ್ಕಾರ 2015ರ ಆಗಸ್ಟ್ ನಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಈ ವರ್ಷದ ಮೇ ತಿಂಗಳಿನಲ್ಲಿ ಈ ಹುದ್ದೆಯಿಂದ ನಿವೃತ್ತರಾಗಿದ್ದ ಇವರನ್ನು ಸರ್ಕಾರ 15ನೇ ಹಣಕಾಸು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿತ್ತು. ನಿವೃತ್ತರಾದ ಬಳಿಕವೂ ಅಗತ್ಯ ಬಿದ್ದರೆ ಸರ್ಕಾರಕ್ಕೆ ಸೇವೆ ಸಲ್ಲಿಸಲು ಸಿದ್ಧ ಎಂದು ಶಕ್ತಿಕಾಂತ್ ದಾಸ್ ಈ ಹಿಂದೆ ತಿಳಿಸಿದ್ದರು.

2016ರ ನವೆಂಬರ್ 8 ರಂದು ನೋಟು ನಿಷೇಧವಾದ ಬಳಿಕ ಡಿಸೆಂಬರ್ 30ರ ವರೆಗೆ ಕೇಂದ್ರ ಸರ್ಕಾರ ಹಲವು ಬಾರಿ ಸುದ್ದಿಗೋಷ್ಠಿಯನ್ನು ನಡೆಸಿತ್ತು. ಈ ಸಮಯದಲ್ಲಿ ಶಕ್ತಿಕಾಂತ್ ದಾಸ್ ಅವರೇ ಮಾಧ್ಯಮಗಳಿಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದ ಮೂಲಕ ಕೂಡಲೇ ಸರ್ಕಾರ ನಿರ್ಧಾರವನ್ನು ತಿಳಿಸುತ್ತಿದ್ದರು. ನೋಟು ನಿಷೇಧ ನಿರ್ಧಾರದಿಂದಾಗಿ ಜನರಲ್ಲಿ ಮತ್ತು ಬ್ಯಾಂಕ್ ಗಳಲ್ಲಿ ಮೂಡುತ್ತಿದ್ದ ಗೊಂದಲಗಳನ್ನು ನಿವಾರಿಸುವ ಮೂಲಕ ಸರ್ಕಾರದ ಟ್ರಬಲ್ ಶೂಟರ್ ಆಗಿ ಶಕ್ತಿಕಾಂತ್ ದಾಸ್ ಕೆಲಸ ಮಾಡಿದ್ದರು. ಇದನ್ನೂ ಓದಿ: 1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *