ಅಪ್ಪು (Appu) ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ಎರಡು ವರ್ಷವೇ ಸಮೀಪಿಸುತ್ತಿದೆ. ಈಗಂತೂ ಸಮಾಧಿ (Samadhi) ಸಾಕ್ಷಾತ್ ದೇವಸ್ಥಾನವೇ ಆಗಿಬಿಟ್ಟಿದೆ. ಜೀವಿತಾವಧಿಯಲ್ಲೊಮ್ಮೆ ಪರಮಾತ್ಮ ಚಿರನಿದ್ರೆಗೆ ಜಾರಿರುವ ಆ ಜಾಗವನ್ನ ಕಣ್ಣಾರೆ ನೋಡಬೇಕೆಂಬ ಹಂಬಲದಿಂದ ನಿತ್ಯವೂ ಕಂಠೀರವ ಸ್ಟುಡಿಯೋಗೆ ಆಗಮಿಸುವವರ ಸಂಖ್ಯೆ ಅಧಿಕವಾಗ್ತಿದೆ. ಆಶ್ಚರ್ಯ ಅನ್ನೋ ರೀತಿಯಲ್ಲಿ ಈ ಒಂದು ತಿಂಗಳಲ್ಲಿ ಅಪ್ಪು ಸಮಾಧಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಮಹಿಳೆಯರು ತಂಡೋಪತಂಡವಾಗಿ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ.
ಹೌದು, ಪರಮಾತ್ಮನ ಪೂಜೆಗೆ ಕೊನೆಯಿಲ್ಲ. ಹೃದಯದಲ್ಲಿ ಅಪ್ಪು ಜಪ ನಿಲ್ಲೋದಿಲ್ಲ. ಇದ್ದಾಗಲೂ ಉಪಕಾರಿ, ಹೋದಮೇಲೂ ಜನಹಿತಕ್ಕಾಗಿ ಹುಟ್ಟಿರುವ ಜೀವವೇ ಅಪ್ಪು. ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಬಿಟ್ಟುಹೋಗಿ ಒಂದು ವರ್ಷ ಎಂಟು ತಿಂಗಳೇ ಉರುಳಿದೆ. ಅಪ್ಪುವನ್ನ ನೆನೆದರೆ ಸಾಕು ಅಂದಿನಿಂದ ಇಂದಿಗೂ ಕಣ್ಣಂಚಲಿ ಇಳಿಯುವ ಕಂಬನಿ ನಿಲ್ಲಿಸಲಾಗದು. ಜನತೆಗೆ ಜೀವಿತಾವಧಿಯಲ್ಲೊಮ್ಮೆ ಕಾಶಿಗೋ, ಧರ್ಮಸ್ಥಳಕ್ಕೋ, ಮಂತ್ರಾಲಯಕ್ಕೋ ಹೋಗಬೇಕೆನ್ನುವ ಆಸೆಯೊಂದಿಗೆ ಅಪ್ಪು ಸಮಾಧಿಗೂ ಒಮ್ಮೆ ಭೇಟಿಕೊಡಬೇಕೆಂಬ ಸಂಕಲ್ಪ ಸೇರಿಕೊಂಡಿದೆ. ಪರಿಣಾಮ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿ ಪ್ರವಾಸಿ ತಾಣವಾಗಿದೆ. ನಿತ್ಯ ಜನಜಂಗುಳಿಯಿಂದ ಗಿಜಿಗುಡುತ್ತದೆ. ವೀಕೆಂಡ್ ಬಂದರೆ ಸಾಕು ಜಾತ್ರೆಯೇ ಶುರುವಾಗಿಬಿಡುತ್ತೆ.
ಅಪ್ಪು (Puneeth Rajkumar) ಸಮಾಧಿಗೆ ಭೇಟಿ ಕೊಡುವವರ ಸಂಖ್ಯೆ ಪ್ರತಿನಿತ್ಯ ಎರಡು ದಿಂದ ಐದು ಸಾವಿರದವರೆಗೂ ಇರುತ್ತೆ. ವೀಕೆಂಡ್‌ನಲ್ಲಿ ಇದು 25 ಸಾವಿರಕ್ಕೂ ಹೋಗುತ್ತದೆ. ಇದೇ ಕಾರಣಕ್ಕೆ ಕಂಠೀರವ ಸ್ಟುಡಿಯೋ ಯಾವ ಪ್ರವಾಸಿ ಸ್ಥಳಕ್ಕೂ ಕಮ್ಮಿ ಇಲ್ಲದಂತಾಗಿದೆ. ಎಷ್ಟೋ ಕುಟುಂಬಗಳು ಇದರಿಂದ ಜೀವನ ನಿರ್ವಹಿಸುತ್ತಿವೆ. ಕಾರಣ ಕಂಠೀರವ ಸುತ್ತಮುತ್ತ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಫುಡ್ ಸ್ಟ್ರೀಟ್, ಆಟಿಕೆಗಳು, ಹೂವುಹಣ್ಣು, ಜ್ಯೂಸ್, ಗಿಫ್ಟ್ ಐಟಮ್ಸ್ ಹೀಗೆ ದೊಡ್ಡ ಮಟ್ಟಿಗೆ ವ್ಯಾಪಾರ ನಡೆಯುವ ಸ್ಥಳವಾಗಿದೆ ಅಪ್ಪು ಸಮಾಧಿ ಸುತ್ತಲಿನ ಜಾಗ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸುಳಿವು ಕೊಟ್ಟ ‘ಬಿಗ್ ಬಾಸ್’ ಅನುಪಮಾ ಗೌಡ
ಬದುಕಿ ಬಾಳಬೇಕಾದ ಕಾಲದಲ್ಲಿ ದಿಢೀರ್ ಕಣ್ಮರೆಯಾದವರು ಅಪ್ಪು. ಓರ್ವ ಮನುಷ್ಯ ಮಾಡಲಾಗದಷ್ಟು ಸರಳತೆ, ದಾನ, ಸುಸಂಸ್ಕೃತ ನಡತೆಗೆ ಹೆಸರು ವಾಸಿಯಾದ ಪುನೀತ್ ಈ ಶತಮಾನದ ಹೀರೋ. ಈಗಾಗಲೇ ಇಂತಹ ಪುಣ್ಯಾತ್ಮ ಇದ್ದಾಗಂತೂ ನೋಡಲಾಗಲಿಲ್ಲ, ಸಮಾಧಿಯನ್ನಾದರೂ ದರ್ಶನ ಮಾಡೋಣ. ಪಾದದ ಬಳಿಯೊಂದು ಹೂವಿಟ್ಟು ಕೈಮುಗಿದು ಬರೋಣ ಎಂಬ ಸಂಕಲ್ಪದ ಪರಿಣಾಮ ಕಂಠೀರವ ಸ್ಟುಡಿಯೋ ಎಷ್ಟೋ ಕುಟುಂಬಗಳಿಗೆ ಇಂದು ಅನ್ನ ನೀಡುತ್ತಿದೆ. ಇದೀಗ ಮುಖ್ಯವಾಗಿ ಸರ್ಕಾರದ ಶಕ್ತಿ ಯೋಜನೆ ಜಾರಿ ಮಾಡಿರುವ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಭಿಮಾನಿಗಳ ಜನದಟ್ಟಣೆ ಹಿಂದಿನದಕ್ಕಿಂತ ದುಪ್ಪಟ್ಟಾಗಿದೆ.
ಜೂನ್ ತಿಂಗಳಿಂದ ಶಕ್ತಿ ಯೋಜನೆ (Shakti Yojana) ಜಾರಿಯಾಗಿರುವ ಹಿನ್ನೆಲೆ, ಕೆಲ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ಹಲವು ದೇವಸ್ಥಾನಗಳಿಗೆ ಭಕ್ತರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣದ ಹಿನ್ನೆಲೆ ಮಹಿಳೆಯರು (Woman) ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸದಲ್ಲಿ ತೊಡಗಿದ್ದಾರೆ. ಕೆಲ ಬಡ ಕುಟುಂಬಗಳಿಗೆ ದೂರದ ಪ್ರಯಾಣಕ್ಕೆ ಬೇಕಾದಷ್ಟು ಹಣ ಇರೋದಿಲ್ಲ. ಹೀಗಾಗಿ ಇಷ್ಟು ದಿನ ನೋಡುವ ಮನಸ್ಸಿದ್ದ ಜಾಗಕ್ಕೆ ಈಗ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಮಹಿಳೆಯರು ಗುಂಪುಗುಂಪಾಗಿ ಬಸ್ ಹತ್ತುತ್ತಿದ್ದಾರೆ. ಹೀಗೆ ಅವರು ಬಂದಿಳಿಯೋದು ಗುರುಗುಂಟೆಪಾಳ್ಯ ಸಿಗ್ನಲ್‌ನಲ್ಲಿ. ಅಲ್ಲಿಂದ ಅವರು ಹೊರಡುವುದೇ ಸಮೀಪದಲ್ಲೇ ಇರುವ ಅಪ್ಪು ಸಮಾಧಿಗೆ.
ವೀಕೆಂಡ್‌ನಲ್ಲಿ ಪುನೀತ್ ಸಮಾಧಿ ಭಾರಿ ಜನಜಾತ್ರೆಯಿಂದ ಕೂಡಿರುತ್ತದೆ. ಉಚಿತ ಬಸ್ ಪ್ರಯಾಣ ಘೋಷಣೆ ಆದ ಬಳಿಕವಂತೂ ಬೆಂಗಳೂರು ಹೊರವಲಯದ ಅಭಿಮಾನಿಗಳು ಹಾಗೂ ರಾಯಚೂರು, ಬಳ್ಳಾರಿ, ಬೀದರ್, ಕೊಪ್ಪಳ, ಗುಲ್ಬರ್ಗಾದಿಂದಲೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಂಠೀರವಕ್ಕೆ ಕಾಲಿಟ್ಟು ಮೊದಲಿಗೆ ಅಪ್ಪು ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ಪಾರ್ವತಮ್ಮ, ಕೊನೆಗೆ ಅಣ್ಣಾವ್ರ ಸಮಾಧಿಗೆ ಒಂದು ದೀರ್ಘದಂಡ ನಮಸ್ಕಾರ ಹಾಕಿ ಹೊರನಡೆಯುತ್ತಾರೆ. ಹೀಗೆ ಬಂದವರು ಹೊರಗಡೆ ಹೋಗಿ ನೆನಪಿಗೊಂದು ವ್ಯಾಪಾರ ಮಾಡಿಕೊಂಡು ತಣ್ಣಗೆ ಕುಳಿತು ತಿಂಡಿ-ತಿನಿಸು ತಂಪುಪಾನೀಯ ಕುಡಿದು ಮನೆ ದಾರಿ ಹಿಡಿಯುತ್ತಾರೆ.
ಕರುನಾಡಿಗೆ ಅಪ್ಪು ಎಂದರೆ ಸಾಕ್ಷಾತ್ ಕಣ್ಣೆದುರಿಗಿನ ದೈವ. ಆ ದೈವಕ್ಕೆ ಕಟ್ಟಿಸಲಾದ ಮಂದಿರವೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಎನ್ನುವ ಭಾವ ಜನರದ್ದು. ಇದೇ ಕಾರಣಕ್ಕೆ ಮಕ್ಕಳು, ವೃದ್ಧರು ಅಪ್ಪು ಸಮಾಧಿಗೆ ದರ್ಶನ ಕೊಡ್ತಾರೆ. ಹರಕೆ ಕಟ್ಟಿಕೊಳ್ತಾರೆ. ಹಸುಗೂಸುಗಳನ್ನು ಕರೆತಂದು ನಾಮಕರಣ ಮಾಡ್ತಾರೆ. ಹೊಸತೇನಾದರೂ ಕೆಲಸ ಪ್ರಾರಂಭಿಸಬೇಕಾದರೆ ಅಪ್ಪು ಸಮಾಧಿಗೆ ನಮಿಸಿ ಮುಂದಿನ ಹೆಜ್ಜೆ ಇಡ್ತಾರೆ. ಶಕ್ತಿ ಯೋಜನೆ ಜಾರಿಯಾದ್ಮೇಲೆ ಅಪ್ಪು ಅಭಿಮಾನಿಗಳಿಗೆ ತಮ್ಮ ಆಸೆ ಪೂರೈಸಿಕೊಳ್ಳುವ ದಾರಿ ಇನ್ನಷ್ಟು ಸುಲಭವಾಗಿದೆ.
ಅಪ್ಪು ಅಂತಿಮ ದರ್ಶನದ ವೇಳೆ 25 ಲಕ್ಷ ಜನರು ಸೇರಿ ಇತಿಹಾಸವೇ ನಿರ್ಮಾಣವಾಗಿತ್ತು. ಬಳಿಕ ಸುಮಾರು ಮೂರು ತಿಂಗಳವರೆಗೂ ಅಪ್ಪು ಸಮಾಧಿ ಯಾವ ಧಾರ್ಮಿಕ ಕ್ಷೇತ್ರಕ್ಕೂ ಕಮ್ಮಿ ಇಲ್ಲದಂತೆ ಜನಸ್ತೋಮದಿಂದ ಕೂಡಿತ್ತು. ಸುಮಾರು ಒಂದು ವರ್ಷದವರೆಗೂ ಇದೇ ನಡೆಯುತ್ತಾ ಬಂತು. ಇದೀಗ ಎರಡು ವರ್ಷ ಸಮೀಪಿಸುತ್ತಿದ್ದರೂ ಅಪ್ಪು ಸಮಾಧಿಗೆ ಆಗಮಿಸುವವರ ಸಂಖ್ಯೆ ಇಳಿಮುಖವಾಗಿಲ್ಲ. ಇದಕ್ಕೇ ಅನ್ನೋದು ಅಪ್ಪು ಅಮರ. ನಗುವಿಗೆ ಬರ ಇರದ ರಾಜಕುಮಾರ.
Web Stories