ನವದೆಹಲಿ: ಹಲವರಿಗೆ ತಮ್ಮ ನೆಚ್ಚಿನ ನಟ, ನಟಿಯರ ಮದುವೆ ಕುರಿತು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅದರಲ್ಲೂ ಬಾಲಿವುಡ್ ಕಿಂಗ್ ಖಾನ್ ಅವರ ವಿವಾಹ ವಿಭಿನ್ನ ಇತರರಿಗೆ ಮಾದರಿ ಎಂಬುದು ತಿಳಿದೇ ಇದೆ. ಆದರೆ ಅವರ ವಿವಾಹದ ಕುರಿತು ಶಾರುಖ್ ಖಾನ್ ಇನ್ನೂ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಶಾರುಖ್ ಖಾನ್ ಅವರ ವೈಯಕ್ತಿಕ ಜೀವನ ಹಲವರಿಗೆ ಮಾದರಿ ಎಂಬುದರಲ್ಲಿ ಅನುಮಾನವಿಲ್ಲ. ಅವರು ಸಮಾಜ ಹಾಗೂ ಧರ್ಮವನ್ನು ಮೀರಿ ಪ್ರೇಮ ವಿವಾಹವಾಗಿದ್ದು, ಅದೇ ರೀತಿ ಇತರರಿಗೆ ಮಾದರಿ ಎಂಬಂತೆ ತಮ್ಮ ಸಂಸಾರ ನೌಕೆಯನ್ನು ನಡೆಸುತ್ತಿದ್ದಾರೆ. ಅಂತರ್ ಧರ್ಮೀಯ ವಿವಾಹವಾದ ಕಾರಣ ಕಿಂಗ್ ಖಾನ್ ವಿವಾಹದ ಕುರಿತು ಈ ಹಿಂದೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಹೀಗಾಗಿ ಅವರ ಪ್ರೀತಿ ಹಾಗೂ ಮದುವೆ ಬಗ್ಗೆ ತಿಳಿಯಲು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಈಗಲೂ ಸಮಯ ಸಿಕ್ಕಾಗಲೆಲ್ಲ ಈ ಕರಿತು ಪ್ರಶ್ನಿಸುತ್ತಲೇ ಇರುತ್ತಾರೆ.
ಅದರಂತೆ ಇದೀಗ ಸಂದರ್ಶನವೊಂದರಲ್ಲಿ ಕಿಂಗ್ ಖಾನ್ ಅವರ ವಿವಾಹದ ಕುರಿತು ಪ್ರಶ್ನೆ ಎದ್ದಿದ್ದು, ಈ ವೇಳೆ ಅವರು ತಾವು ಮೂರು ಬಾರಿ ವಿವಾಹವಾಗಿರುವುದರ ಕುರಿತು ವಿವರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೋಡಿ 1991ರಲ್ಲಿ ಪ್ರೇಮ ವಿವಾಹವಾದರು. ಈ ಜೋಡಿ ಮದುವೆಯಾಗಿ 29 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಾದರೂ ಯಾವುದೇ ಕಲಹವಿಲ್ಲದೆ ಸೊಗಸಾಗಿ ಜೀವನ ಸಾಗಿಸುತ್ತಿದ್ದಾರೆ.
ಇದೀಗ ಶಾರುಖ್ ಮೂರು ಬಾರಿ ಮದುವೆಯಾಗಿರುವ ಕುರಿತು ವಿವರಿಸಿದ್ದಾರೆ. ಬಹುತೇಕರಿಗೆ ಕಿಂಗ್ ಖಾನ್-ಗೌರಿ ಜೋಡಿ ಮೂರು ಬಾರಿ ವಿವಾಹವಾಗಿರುವುದು ತಿಳಿದಿಲ್ಲ. ಇದೀಗ ಈ ವಿಚಾರವನ್ನು ಅವರೇ ತಿಳಿಸಿದ್ದಾರೆ. ಶಾರುಖ್ ಖಾನ್ ಅವರು ದೆಹಲಿಯಲ್ಲಿದ್ದಾಗ ಗೌರಿ ಖಾನ್ ಅವರೊಂದಿಗೆ ಸ್ನೇಹವಾಯಿತು. ನಂತರದ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೇಮವಾಗಿ ಬದಲಾಯಿತು. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದೇ ರೀತಿ ಮೂರು ಬಾರಿ ಮದುವೆಯಾದರು.
ಅದ್ಹೇಗೆ ಅಂತೀರಾ ಇಲ್ಲಿದೆ ನೋಡಿ, 25 ಅಕ್ಟೋಬರ್ 1991ರಂದು ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇದಾದ ಬಳಿಕ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ನಂತರ ಕೊನೆಯದಾಗಿ ಸಾಂಪ್ರದಾಯಿಕ ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಶಾರುಖ್ ಖಾನ್ ಮುಸ್ಲಿಂ, ಅವರ ಪತ್ನಿ ಗೌರಿ ಖಾನ್ ಪಂಜಾಬಿ ಹಿಂದೂ. ಹೀಗಾಗಿ ಎರಡೂ ಧರ್ಮಗಳ ಶಾಸ್ತ್ರದ ಪ್ರಕಾರ ಮದುವೆಯಾಗಬೇಕೆಂದು 3 ಬಾರಿ ವಿವಾಹವಾದರಂತೆ.
ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಮೂವರು ಮಕ್ಕಳ ಪೋಷಕರಾಗಿದ್ದು, ಹಿರಿಯ ಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್ ಮತ್ತು ನಂತರ 2013 ರಲ್ಲಿ ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಗ ಅಬ್ರಾಮ್‍ಗೆ ಜನ್ಮ ನೀಡಿದ್ದಾರೆ. ಈಗಲೂ ಎರಡೂ ಧರ್ಮದ ಸಂಪ್ರದಾಯವನ್ನು ಈ ಕುಟುಂಬ ಪಾಲಿಸುತ್ತೆ.