ಇಸ್ಲಾಮಾಬಾದ್: ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಪರ ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಆಟಗಾರ ಶಾಹಿದ್ ಅಫ್ರಿದಿ ಬ್ಯಾಟಿಂಗ್ ನಡೆಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅಫ್ರಿದಿ, ಮಾನವ ಹಕ್ಕುಗಳ ದುರುಪಯೋಗದ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ. ಯಾಸಿನ್ ಮಲಿಕ್ ವಿರುದ್ಧದ ಆರೋಪಗಳು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆ ಅಡ್ಡಿಯಾಗದಿರಲಿ. ಕಾಶ್ಮೀರ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ನಿಗಾ ಇಡುವಂತೆ ಯುಎನ್ (ವಿಶ್ವಸಂಸ್ಥೆ) ಗೆ ಒತ್ತಾಯಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ
ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ವಿವಿಧ ಪ್ರಕರಣಗಳು ಯಾಸಿನ್ ಮಲಿಕ್ ಮೇಲೆ ದಾಖಲಾಗಿತ್ತು. ತನ್ನ ಮೇಲೆ ದಾಖಲಾದ ಆರೋಪಗಳ ಸಂಬಂಧ ಮೇ 10 ರಂದು ಕೋರ್ಟ್‍ನಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಲಿಕ್‍ಗೆ ಮರಣದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕೋರ್ಟ್‍ಗೆ ಮನವಿ ಮಾಡಿತ್ತು. ಈ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ಇಂದು ರಾಷ್ಟ್ರೀಯ ತನಿಖಾದಳದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,00,000 ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಪುಟಿನ್‌ನೊಂದಿಗೆ ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ
https://twitter.com/SAfridiOfficial/status/1529357436733337600
ವಿವಿಧ ಪ್ರಕರಣಗಳ ಮೇಲೆ 2017ರಲ್ಲಿ ಮಲಿಕ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಭಾರಿ ಭದ್ರತೆಯಲ್ಲಿದ್ದ ಯಾಸಿನ್ ಮಲಿಕ್ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಅಪರಾಧ ಸಂಚು) ಮತ್ತು 124 (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿದೆ.



