ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.
2012ರಿಂದ ದ್ವಿಪಕ್ಷೀಯ ಸರಣಿಗಳಿಂದ ದೂರವೇ ಉಳಿದಿರುವ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ತಂಡಗಳು ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಆದರೆ ಕಳೆದ ವರ್ಷ ಪಾಕ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಭಾರತದ ವಿರುದ್ಧ ದೂರು ನೀಡಿ ದ್ವಿಪಕ್ಷೀಯ ಸರಣಿ ಆಡುವಂತೆ ಇಲ್ಲವೇ ಪರಿಹಾರ ಮೊತ್ತ ನೀಡುವಂತೆ ಕೋರಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಇತ್ತ ಬಿಸಿಸಿಐ ಕೂಡ ಪಾಕ್ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿರಲಿಲ್ಲ.
Advertisement
Advertisement
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕ್ ಮಾಜಿ ಆಟಗಾರ ಶಾಹೀದ್ ಅಫ್ರಿದಿ, ಪಾಕ್-ಭಾರತ ನಡುವೆ ಸರಣಿ ನಡೆದಿರಲು ಪ್ರಧಾನಿ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರುವವರೆಗೂ ಟೂರ್ನಿ ನಡೆಯುವುದು ಅನುಮಾನ. ಮೋದಿ ಅಜೆಂಡಾ ಏನೆಂದು ಭಾರತೀಯರಿಗೂ ಅರಿವಿದೆ. ಮೋದಿ ಯಾವಾಗಲೂ ಋಣಾತ್ಮಕ ಆಲೋಚನೆಗಳನ್ನೇ ಹೊಂದಿರುತ್ತಾರೆ. ಅವರ ಕಾರಣದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.
Advertisement
ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಪಿಸಿಬಿ ಕೈಗೊಂಡಿರುವ ಪ್ರಯತ್ನಗಳಿಗೆ ಅಫ್ರಿದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Advertisement
ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಈಗಾಗಲೇ ಹೇಳಿದೆ. ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಪಾಕ್, ಭಾರತವಿಲ್ಲದೇ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಸಿದರೆ ನಷ್ಟ ಸಂಭವಿಸಲಿದೆ. ಆದ್ದರಿಂದ ಪಾಕ್‍ನಲ್ಲಿ ಟೂರ್ನಿಯನ್ನು ಆಯೋಜಿಸುವುದರ ಬದಲು ಯುಎಇನಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.