ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಪೇರ್ ಶಾರುಖ್ ಖಾನ್ (Shah Rukh Khan) ಹಾಗೂ ಕಾಜಲ್ (Kajol) ಜೊತೆಯಾಗಿ ನಿಂತು ತಮ್ಮದೇ ಪ್ರತಿಮೆಯನ್ನ ಅನಾವರಣ ಮಾಡಿದ್ದಾರೆ. ವಿಶೇಷ ಅಂದ್ರೆ ಪ್ರತಿಮೆ ಸ್ಥಾಪನೆಯಾಗಿರೋದು ಲಂಡನ್‌ನಲ್ಲಿ. 30 ವರ್ಷದ ಹಿಂದಿನ ಎರಡು ಪಾತ್ರದ ಮಾಯೆಗೆ ಇಂದು ಲಂಡನ್‌ನಲ್ಲಿ ಪ್ರತಿಮೆಯಾಗಿದೆ. ಅದುವೇ ಡಿಡಿಎಲ್‌ಜೆ ಚಿತ್ರದ ರಾಜ್ ಹಾಗೂ ಸಿಮ್ರನ್ ಪಾತ್ರದ ಮೋಡಿ. ಲಂಡನ್‌ನಲ್ಲಿ ಚಿತ್ರೀಕರಣವಾದ ಡಿಡಿಎಲ್‌ಜೆ ಚಿತ್ರದ ರಾಜ್ ಹಾಗೂ ಸಿಮ್ರನ್ ಪಾತ್ರದ ಜೋಡಿ ಪ್ರತಿಮೆಯನ್ನ ಖುದ್ದು ಕಾಜಲ್ ಹಾಗೂ ಶಾರುಖ್ ಖಾನ್ ಹಾಜರಿದ್ದು ತಮ್ಮ ಕೈಯಾರೆ ಅನಾವರಣ ಮಾಡಿದ್ದಾರೆ.
ಬಾಲಿವುಡ್‌ನ ಹಿಟ್ ಜೋಡಿ ಶಾರುಖ್ ಖಾನ್ ಹಾಗೂ ಕಾಜಲ್. `ಬಾಜೀಗರ್’ ಸಿನಿಮಾದಿಂದ ಶುರುವಾದ ಈ ಜೋಡಿ ಸಕ್ಸಸ್ ಜರ್ನಿ ಇದುವರೆಗೂ ಮುಂದುವರೆದಿದೆ. ಬಾಜೀಗರ್ ಬಳಿಕ ಈ ಜೋಡಿ ತೆರೆಮೇಲೆ ವಿಸ್ಮಯ ಸೃಷ್ಟಿಸಿದ ಚಿತ್ರವೆಂದರೆ ಅದು `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ (Dilwale Dulhania Le Jayenge). ಈ ಚಿತ್ರದಲ್ಲಿ ಶಾರುಖ್ ಖಾನ್ ರಾಜ್ ಪಾತ್ರದಲ್ಲಿ ಕಾಜಲ್ ಸಿಮ್ರನ್ ಪಾತ್ರದಲ್ಲಿ ಮಿಂಚಿದ್ದರು.
ಮ್ಯೂಸಿಕಲ್ ಹಿಟ್ ಈ ಚಿತ್ರ ತೆರೆಕಂಡ ಹತ್ತು ವರ್ಷಗಳಿಂದ ಮುಂಬೈನ ಮರಾಠಾ ಚಿತ್ರಮಂದಿರಲ್ಲಿ ಪ್ರತಿದಿನ ಪ್ರದರ್ಶನ ಕಂಡಿತ್ತು. ಲಂಡನ್‌ನಲ್ಲಿ ರಾಜ್, ಸಿಮ್ರನ್ ಜೋಡಿಯ ಪ್ರೇಮ್ ಕಹಾನಿ ಶುರುವಾಗಿ ಮದುವೆ ಮನೆಯಲ್ಲಿ ಕೊನೆಗೊಳ್ಳುತ್ತದೆ. ಲಂಡನ್‌ನಲ್ಲೂ ಡಿಡಿಎಲ್‌ಜೆ ಚಿತ್ರ ದಾಖಲೆ ಮೂಲಕ ಹೆಸರು ಮಾಡಿತ್ತು. ಇದೀಗ ಅಲ್ಲಿಯೇ ಬಾಲಿವುಡ್‌ನ ರಾಜ್ ಹಾಗೂ ಸಿಮ್ರನ್ ಪಾತ್ರ ಮ್ಯೂಸಿಯಂ ರೂಪದಲ್ಲಿ ಉಳಿದುಕೊಳ್ಳಲಿದೆ ಅನ್ನೋದು ವಿಶೇಷ.

