ಆಡಿದ 18 ಟಿ-20 ಪಂದ್ಯಗಳಲ್ಲೇ ನಂ.1 ಪಟ್ಟಕ್ಕೇರಿದ 16ರ ಶೆಫಾಲಿ

Public TV
2 Min Read
Shafali Verma

– ಮಿಥಾಲಿ ನಂತರ ಈ ದಾಖಲೆ ಮಾಡಿದ 2ನೇ ಆಟಗಾರ್ತಿ
– ಒಂದೇ ಬಾರಿಗೇ 19 ಸ್ಥಾನ ಜಿಗಿತ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಶೆಫಾಲಿ ಆಡಿದ 18 ಪಂದ್ಯಗಳಲ್ಲೇ ಐಸಿಸಿ ಟಿ-20 ರ‍್ಯಾಂಕಿಂಗ್ ನಲ್ಲಿ 19 ಸ್ಥಾನ ಜಿಗಿತ ಕಂಡು ನಂಬರ್ ಒನ್ ಪಟ್ಟಕ್ಕೇರಿದ್ದಾರೆ. ಈ ಮೂಲಕ ನಾಯಕಿ ಮಿಥಾಲಿ ರಾಜ್ ನಂತರ ಮೊದಲ ಸ್ಥಾನಕ್ಕೇರಿದ ಭಾರತದ ಎರಡನೇ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಸದ್ಯ ನಡೆಯುತ್ತಿರುವ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಇರುವ ಶೆಫಾಲಿ ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಇಂದು ಐಸಿಸಿ ನೂತನ ಮಹಿಳಾ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶೆಫಾಲಿ ಬರೋಬ್ಬರಿ 19 ಸ್ಥಾನ ಏರಿಕೆಗೊಂಡು 761 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಅಲಕಂರಿಸಿದ್ದಾರೆ. 2018ರಿಂದ ನಂಬರ್ ಒನ್ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‍ನ ಸೂಜೀ ಬೇಟ್ಸ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ಮಹಿಳಾ ವಿಶ್ವಕಪ್‍ನಲ್ಲಿ ಭಾರತ ಆಡಿದ ನಾಲ್ಕು ಪಂದ್ಯಗಳಲ್ಲಿ ಆರಂಭದಲ್ಲಿ ಬಂದು ಅಬ್ಬರಿಸಿದ ಶೆಫಾಲಿ, ಸತತ ನಾಲ್ಕು ಪಂದ್ಯಗಳಲ್ಲೂ ಭಾರತ ಗೆಲವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ ಶೈಫಾಲಿ ವರ್ಮಾ ಅವರು 19 ಸ್ಥಾನ ಏರಿಕೆ ಪಡೆದಿದ್ದಾರೆ. ಇವರನ್ನು ಬಿಟ್ಟರೆ ಸೂಜೀ ಬೇಟ್ಸ್ ಎರಡನೇ ಸ್ಥಾನ, ಆಸ್ಟ್ರೇಲಿಯಾದ ಬೆತ್ ಮೂನಿ ಮೂರನೇ ಸ್ಥಾನ, ನ್ಯೂಜಿಲೆಂಡ್‍ನ ಸೋಫಿ ಡಿವೈನ್ ನಾಲ್ಕನೇ ಸ್ಥಾನ ಮತ್ತು ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಐದನೇ ಸ್ಥಾನದಲ್ಲಿ ಇದ್ದಾರೆ.

ಮಂದಾನ 2 ಸ್ಥಾನ ಇಳಿಕೆ
ಸಧ್ಯ ಮಹಿಳಾ ವಿಶ್ವಕಪ್‍ನಲ್ಲಿ ಅಷ್ಟೇನು ಸದ್ದು ಮಾಡದ ಮತ್ತೊರ್ವ ಆರಂಭಿಕ ಆಟಗಾರ್ತಿ ಸ್ಮøತಿ ಮಂದಾನ ಅವರು ಐಸಿಸಿ ಬಿಡುಗಡೆ ಮಾಡಿದ ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡು ಸ್ಥಾನ ಕುಸಿತ ಕಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಮಂದಾನ 701 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇದನ್ನು ಬಿಟ್ಟರೇ ಭಾರತದ ಜೆಮಿಯಾ ರೊಡ್ರಿಕ್ಸ್ ಅವರು 658 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿ ಇದ್ದಾರೆ. ನಾಯಕಿ ಹರ್ಮನ್‍ಪ್ರೀತ್ ಕೌರ್ 12ನೇ ಸ್ಥಾನದಲ್ಲಿ ಇದ್ದಾರೆ.

Smriti Mandhana 2

2020 ರ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಸದ್ಯ ಅಜೇಯವಾಗಿ ಉಳಿದಿರುವ ಭಾರತ ಲೀಗ್ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ಪ್ರವೇಶದ ಮಾಡಿದ್ದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ನಾಲ್ಕು ಪಂದ್ಯಗಳಲ್ಲಿ ಬಿಂದಾಸ್ ಆಗಿ ಬ್ಯಾಟ್ ಬೀಸಿದ್ದ ಶೆಫಾಲಿ, ಮೊದಲ ಪಂದ್ಯದಲ್ಲಿ 29, ಎರಡನೇ ಪಂದ್ಯದಲ್ಲಿ 39 ಮೂರನೇ ಪಂದ್ಯದಲ್ಲಿ 46 ಮತ್ತು ನಾಲ್ಕನೇ ಪಂದ್ಯದಲ್ಲಿ 47 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಲ್ಕು ಪಂದ್ಯಗಳಲ್ಲಿ 146.96 ಸ್ಟ್ರೈಕ್‍ರೇಟ್‍ನಲ್ಲಿ ಬ್ಯಾಟ್ ಬೀಸಿರುವ ಶೆಫಾಲಿ ಒಟ್ಟು, 161 ರನ್ ಹೊಡೆಸಿದ್ದಾರೆ.

Shafali Verma A

ಮೆಚ್ಚುಗೆ ಸೂಚಿಸಿದ್ದ ವೀರೂ
ನ್ಯೂಜಿಲೆಂಡ್ ವಿರುದ್ಧದ ಶೆಫಾಲಿ ಅವರ ಇನ್ನಿಂಗ್ಸ್ ವೀಕ್ಷಿಸಿದ್ದ ವೀರು ಟ್ವೀಟ್ ಮಾಡಿದ್ದರು. `ವಾವ್, ಸಹೋದರ. ವಾವ್’ ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದು ಹೊಗಳಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಶೆಫಾಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *