ಸರ್ಕಾರ ಏನು ಮನೆ-ಮನೆ ಬೆಡ್‌ರೂಮ್‌ಗೆ ಹೋಗುತ್ತಾ? – ಲಿವ್‌ಇನ್‌ ರಿಲೇಷನ್‌ ನೋಂದಣಿ ಕಡ್ಡಾಯಕ್ಕೆ ಮಹಿಳಾ ಹೋರಾಟಗಾರ್ತಿ ವಿರೋಧ

Public TV
2 Min Read
live in relationship

ಧಾರವಾಡ: ಇತ್ತೀಚೆಗಷ್ಟೇ ಉತ್ತರಖಾಂಡದ (Uttarakhand) ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನ (UCC) ಜಾರಿಗೊಳಿಸಿದೆ. ಈ ಮೂಲಕ ಇಡೀ ದೇಶದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಈ ಸಂಹಿತೆ ಮೂಲಕ ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ಈ ಕ್ರಮಕ್ಕೆ ದೆಹಲಿ ಮೂಲದ ಮಹಿಳಾ ಹೋರಾಟಗಾರ್ತಿ ಶಬಮನ್‌ ಹಶ್ಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿವ್‌ಇನ್‌ ರಿಲೇಷನ್‌ಶಿಪ್‌ಗೆ (Live In Relationship) ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಉತ್ತರಖಾಂಡ ಸರ್ಕಾರ ಹೇಳಿದೆ. ಸರ್ಕಾರ ಏನು ಮನೆ ಮನೆ ಬೆಡ್‌ರೂಮ್‌ಗೆ ಹೋಗುತ್ತಾ? ಇದು ಸರಿಯಾದ ಕ್ರಮವಲ್ಲ. ಆ ನಿಯಮಕ್ಕೆ ನಮ್ಮ ವಿರೋಧವಿದೆ. ನಾವು ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ

ಇದೇ ವೇಳೆ, ರಾಣಿ ಚೆನ್ನಮ್ಮನ ಹೋರಾಟಕ್ಕೆ 200 ವರ್ಷ ಪೂರ್ಣಗೊಂಡ ಸ್ಮರಣಾರ್ಥವಾಗಿ ಫೆ.21 ರಂದು ಚೆನ್ನಮ್ಮನ ಕಿತ್ತೂರಿನಲ್ಲಿ ಬೃಹತ್ ಮಹಿಳಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 1824 ರಲ್ಲಿ ಬ್ರಿಟಿಷರನ್ನು ಎದುರಿಸಿ ಚೆನ್ನಮ್ಮ ಹೋರಾಟ ಮಾಡಿದ್ದರು. ಅದರ ಸ್ಮರಣೆಗಾಗಿ ನಾನೂ ರಾಣಿ ಚೆನ್ನಮ್ಮ ಎಂಬ ಹೆಸರಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಫೆ.21 ರಂದು ʻಕಿತ್ತೂರು ಚಲೋʼ ಅಭಿಯಾನ ನಡೆಸುತ್ತಿದ್ದೇವೆ. ದೇಶದ 18 ರಾಜ್ಯಗಳ 60ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Uttarakhand

ಯುಸಿಸಿ ಮಸೂದೆಯಲ್ಲಿ ಏನಿದೆ?
ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: 15 ಪತ್ರ ಬರೆದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ- ಚೆಲುವರಾಯಸ್ವಾಮಿ

ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು.

Share This Article