Connect with us

Latest

ಶಬರಿಮಲೆ ಭಕ್ತರಿಗೆ ಜಯ: ತೃಪ್ತಿ ದೇಸಾಯಿಂದ ಪುಣೆಗೆ ರಿಟರ್ನ್ ಟಿಕೆಟ್ ಬುಕ್

Published

on

ಕೊಚ್ಚಿ: ಶಬರಿಮಲೆ ದೇವಾಲಯವನ್ನು ಪ್ರವೇಶಿಸಿಯೇ ಸಿದ್ಧ ಎಂದು ಹಠ ಹಿಡಿದಿದ್ದ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಭಕ್ತರ ಪ್ರತಿಭಟನೆಗೆ ಮಣಿದು ಪುಣೆಗೆ ಮರಳುವುದಾಗಿ ಹೇಳಿದ್ದಾರೆ. ಈ ಮೂಲಕ ಸತತ 18 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದ ಭಕ್ತರಿಗೆ ಜಯ ಸಿಕ್ಕಿದೆ.

ಎಷ್ಟು ದಿನವಾದರೂ ಪರವಾಗಿಲ್ಲ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿಯೇ ನೀಡುತ್ತೇನೆ. ಅದಕ್ಕಾಗಿ ಮರಳಿ ಟಿಕೆಟ್ ಬುಕ್ ಮಾಡಿಲ್ಲ ಎಂದು ಹೇಳಿದ್ದ ತೃಪ್ತಿ ದೇಸಾಯಿ ಶುಕ್ರವಾರ ಬೆಳಗ್ಗೆ 4.30ಕ್ಕೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ತೃಪ್ತಿ ಬರುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯೇ ಕೊಚ್ಚಿ ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ಶಬರಿಮಲೆಯ ಭಕ್ತರು, ಬಿಜೆಪಿ, ಆರ್‍ಎಸ್‍ಎಸ್, ಹಿಂದೂಪರ ಸಂಘಟನೆಯ ಸದಸ್ಯರು ಹೊರ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ್ದರು.

ಯಾವುದೇ ಕಾರಣಕ್ಕೆ ನಾವು ತೃಪ್ತಿ ದೇಸಾಯಿ ಅವರನ್ನು ನಿಲ್ದಾಣದಿಂದ ಹೊರ ಬರಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ದಿಗ್ಭಂದನ ಹಾಕಿದ್ದರು. ಈ ಸಮಯದಲ್ಲಿ ತೃಪ್ತಿ ಅವರು ಶಬರಿಮಲೆಗೆ ತೆರಳಲು ಟ್ಯಾಕ್ಸಿ ಬುಕ್ ಮಾಡಿದ್ದರೂ ಟ್ಯಾಕ್ಸಿ ಚಾಲಕರು ಸಹ ಶಬರಿಮಲೆಗೆ ಬರುವುದಿಲ್ಲ ಎಂದು ಹೇಳಿದ್ದರು.

ನಾವು ತೃಪ್ತಿ ದೇಸಾಯಿ ಅವರನ್ನು ಕರೆದುಕೊಂಡು ಹೋಗುವುದಿಲ್ಲ. ಬೇಕಾದರೆ ಪೊಲೀಸ್ ಭದ್ರತೆಯಲ್ಲಿ ಅಥವಾ ಸ್ವಂತ ವಾಹನದಲ್ಲಿ ಹೋಗಲಿ ಎಂದು ತಿಳಿಸಿದ್ದರು. ಈ ನಡುವೆ ಕೊಚ್ಚಿ ತಹಶೀಲ್ದಾರ್ ಅವರು ತೃಪ್ತಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರೂ ಅದು ಫಲ ನೀಡಲಿಲ್ಲ.

ಭಕ್ತರ ಪ್ರತಿಭಟನೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ತೃಪ್ತಿ ಮತ್ತು ಅವರ ತಂಡ ಕಾನೂನು ತಜ್ಞರ ಜೊತೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಮಾಡಲು ಮುಂದಾದರೆ ಹೇಗೆ ಎಂದು ಚರ್ಚಿಸಿದರು. ತೃಪ್ತಿ ವಿಮಾನ ನಿಲ್ದಾಣದಿಂದ ತೆರಳುವವರೆಗೂ ನಾವು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತ ಕಾರಣ ಅನಿವಾರ್ಯವಾಗಿ ಸಿಐಎಸ್‍ಎಫ್(ಕೇಂದ್ರ ಗೃಹ ಕೈಗಾರಿಕಾ ಭದ್ರತಾ ಪಡೆ) ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು.

ವಿಮಾನ ನಿಲ್ದಾಣದ ಆವರಣದಲ್ಲಿ ಕಳೆದ 13 ಗಂಟೆಯಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ಮತ್ತು ಇಲ್ಲಿಂದ ತೆರಳುವ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುತ್ತಿದೆ. ಹೀಗಾಗಿ ಶಬರಿಮಲೆಗೆ ತೆರಳುವ ತಮ್ಮ ನಿರ್ಧಾರವನ್ನು ಪರಿಶೀಲಿಸುವುದು ಉತ್ತಮ ಎಂದು ಸಿಐಎಸ್‍ಎಫ್ ಅಧಿಕಾರಿಗಳು ಸಲಹೆ ನೀಡಿದ್ದರು. ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದ ತೃಪ್ತಿ ಮರಳಿ ಪುಣೆಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. ಇಂದು ರಾತ್ರಿ 9.25ರ ಏರ್ ಇಂಡಿಯಾ 055 ವಿಮಾನದಲ್ಲಿ ತೃಪ್ತಿ ಮತ್ತು ಅವರ ತಂಡ ಪುಣೆಗೆ ಹೋಗಲು ಟಿಕೆಟ್ ಬುಕ್ ಆಗಿದೆ.

ಪುಣೆ ಮೂಲದ ಭೂ ಮಾತಾ ಬ್ರಿಗೇಡ್ ಸಂಘಟನೆ ನಡೆಸುತ್ತಿರುವ ತೃಪ್ತಿ ದೇಸಾಯಿ ಮಹಿಳಾ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದಾರೆ. ಅಹಮದ್ ನಗರ ಜಿಲ್ಲೆಯ ಶನಿ ಶಿಂಘ್ನಪುರ ದೇವಾಲಯ, ಕೊಲ್ಲಾಪುರ ಜಿಲ್ಲೆಯ ಮಹಾಲಕ್ಷ್ಮೀ ದೇವಾಲಯ ಮತ್ತು ನಾಸಿಕ್ ಜಿಲ್ಲೆಯ ತ್ರಿಯಂಬಕ್ ಶಿವಾ ದೇವಾಲಯ ಮತ್ತಿತರ ಕಡೆಗಳಲ್ಲಿ ಮಹಿಳೆಯರ ವಿರುದ್ಧ ತಾರಾತಮ್ಯ ವಿರುದ್ಧ ಹೋರಾಟ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *