ಕಥೆ ಆಯ್ಕೆ ವಿಚಾರದಲ್ಲಿ ವಿಭಿನ್ನ ಪ್ರಯತ್ನಗಳತ್ತ ಹೊರಳುವ ನಟಿಯರಲ್ಲಿ ವರಲಕ್ಷ್ಮೀ ಶರತ್‌ಕುಮಾರ್ (Varalakshmi Sarath Kumar) ಸಹ ಒಬ್ಬರು. ಈಗ ಇದೇ ನಟಿ ‘ಶಬರಿ’ (Shabari) ಹೆಸರಿನ ಸಿನಿಮಾ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ನಾಯಕಿ ಪ್ರಧಾನ ಈ ಸಿನಿಮಾ ಒಂದೇ ಭಾಷೆಗೆ ಸೀಮಿತವಾಗಿರದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಮೇ 3ರಂದು ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಮಹಾ ಮೂವೀಸ್ ಬ್ಯಾನರ್‌ನಲ್ಲಿ ಮಹೇಂದ್ರ ನಾಥ್ ಕೊಂಡ್ಲಾ ಶಬರಿ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಮಹರ್ಷಿ ಕೊಂಡ್ಲಾ ಈ ಸಿನಿಮಾ ಪ್ರಸೆಂಟ್ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರವನ್ನು ಅನಿಲ್ ಕಾಟ್ಜ್ (Anil Katz) ನಿರ್ದೇಶನ ಮಾಡಿದ್ದಾರೆ. ವಿಶೇಷ ಏನೆಂದರೆ, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ.
ಈ ಸಿನಿಮಾ ಬಗ್ಗೆ ನಿರ್ಮಾಪಕ ಮಹೇಂದ್ರನಾಥ್ ಕೊಂಡ್ಲಾ ಹೇಳುವುದೇನೆಂದರೆ, “ಶಬರಿ ಸಿನಿಮಾದ ಕಥೆ ಮತ್ತು ಸ್ಕ್ರೀನ್ ಪ್ಲೇ ತುಂಬ ವಿಶೇಷವಾಗಿದೆ. ಭಾವುಕ ಎಳೆಯ ಜತೆಗೆ ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್ ಶೈಲಿಯೂ ಈ ಸಿನಿಮಾದಲ್ಲಿರಲಿದೆ. ವರಲಕ್ಷ್ಮೀ ಅವರ ಈ ವರೆಗಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ತುಂಬ ವಿಭಿನ್ನ. ಈ ಸಿನಿಮಾದಲ್ಲಿನ ಅವರ ನಟನೆಯೂ ಅಷ್ಟೇ ರೋಚಕವಾಗಿಯೇ ಮೂಡಿಬಂದಿದೆ” ಎನ್ನುತ್ತಾರೆ.
ಮುಂದುವರಿದು ಮಾತನಾಡುವ ಅವರು, “ಈಗಾಗಲೇ ತೆಲುಗು ಮತ್ತು ತಮಿಳಿನ ಮೊದಲ ಕಾಪಿಯನ್ನು ನೋಡಿರುವುದರಿಂದ, ಎಲ್ಲರಿಗೂ ಇಷ್ಟವಾಗಲಿದೆ ಎಂದು ನಂಬಿದ್ದೇನೆ. ಈ ನಡುವೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಮೇ 3ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ” ಎಂದಿದ್ದಾರೆ.
ವರಲಕ್ಷ್ಮೀ ಶರತ್ ಕುಮಾರ್, ಗಣೇಶ್ ವೆಂಕಟರಮಣನ್, ಶಶಾಂಕ್, ಮೈಮ್ ಗೋಪಿ, ಸುನಯನಾ, ರಾಜಶ್ರೀ ನಾಯರ್, ಮಧುನಂದನ್, ರಶಿಕಾ ಬಾಲಿ (ಬಾಂಬೆ), ವಿವಾ ರಾಘವ್, ಪ್ರಭು, ಭದ್ರಮ್, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು. ಅರ್ಚನ್ ಅನಂತ್, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ತಾರಾಗಣದಲ್ಲಿದ್ದಾರೆ.