ಮಂಗಳೂರು: ಪಕ್ಕದ ಮನೆಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಬಂಧನವಾಗಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಅವಮಾನ ಸಹಿಸಲಾಗದೇ ಕೋರ್ಟ್ ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಪ್ರವೀಣ್ ಪೊಕ್ಸೋ ಕಾಯ್ದೆಯಡಿ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ಮಂಗಳೂರು ಜಿಲ್ಲಾ ಸತ್ರ 2ನೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಬಜಪೆ ಪೊಲೀಸರು ಪ್ರವೀಣ್ ಅವರನ್ನು ಕರೆ ತಂದಿದ್ದರು. ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್‍ನ ನಾಲ್ಕನೇ ಮಹಡಿಯಿಂದ ಜಿಗಿದು ಪ್ರವೀಣ್ ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಣಾಮ ತೀವ್ರ ಗಾಯಗೊಂಡ ಪ್ರವೀಣ್ ರನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ: ಕೋರ್ಟ್ ಕಟ್ಟಡದ ಮೇಲಿಂದ ಬಿದ್ದ ಆರೋಪಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸರು ಆಸ್ಪತ್ರೆಗೆ ಸೇರಿಸದೆ ಅಮಾನವೀಯತೆ ತೋರಿದ್ದಾರೆ ಅಂತಾ ಇದೀಗ ಪೊಲೀಸರ ಮೇಲೆ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಪ್ರವೀಣ್ ಜೊತೆ ಇನ್ನಿಬ್ಬರ ಪೊಲೀಸರ ಹೆಸರೂ ಕೇಳಿ ಬಂದಿದ್ದು ಪ್ರಕರಣದ ಸಮಗ್ರ ತನಿಖೆ ನಡೆಸುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ಹೇಳಿದ್ದಾರೆ.