ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ್ದ ಮಹಿಳೆಗೆ ಒಂದು ರಾತ್ರಿ ಜೊತೆಗೆ ಕಳೆಯುವಂತೆ ಪೇದೆ ಒತ್ತಡ- ಆರೋಪ

Public TV
1 Min Read
BASAVARAJ

ಕಲಬುರಗಿ: ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಹಿಳೆಯೊಬ್ಬಳಿಗೆ ಠಾಣೆಯ ಕಾನ್ಸ್‌ಟೇಬಲ್ (Police Constable) ಒಬ್ಬ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೇಳಿಬಂದಿದೆ.

ಕಮಲಾಪುರ ಪೊಲೀಸ್ (Police) ಠಾಣೆಯ ಕಾನ್ಸ್‌ಟೇಬಲ್ ಬಸವರಾಜ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ಠಾಣೆಯ ಎಸ್‍ಬಿ ಡ್ಯೂಟಿಯಲ್ಲಿದ್ದ ಬಸವರಾಜ್, ಮಹಿಳೆಯ ಪತಿಯನ್ನು ಸರಿದಾರಿಗೆ ತರುವುದಾಗಿ ಹೇಳಿ ಸಲುಗೆ ಬೆಳೆಸಿದ್ದಾನೆ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದು ಆಕೆಗೆ ಕರೆ ಮಾಡಿ ಬಲವಂತವಾಗಿ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಪೀಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ:‌ ಇಂಟರ್‌ನೆಟ್‌ನಲ್ಲಿ ಹುಡುಕಿ ಪ್ಲ್ಯಾನ್- ರಿಮೂವರ್ ಕುಡಿಸಿ ಮಗು ಹತ್ಯೆಗೈದಿದ್ದ ಮಹಿಳೆ ಅರೆಸ್ಟ್

ಇಷ್ಟೇ ಅಲ್ಲದೇ, ತನ್ನ ಕಾರಿನಲ್ಲಿ ಕರೆದೊಯ್ದು ಬಲವಂತವಾಗಿ ಮುತ್ತಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿನ್ನನ್ನು ನಾನು ಮದುವೆಯಾಗುತ್ತೇನೆ, ಗಂಡನನ್ನ ಬಿಟ್ಟು ಬರುವಂತೆ ಒತ್ತಡ ಹೇರಿದ್ದಾನೆ. ಮಹಿಳೆ ಒಪ್ಪದೆ ಇದ್ದಾಗ ಆಕೆಯ ಮೇಲೆ ಕೇಸ್ ಹಾಕಿ, ಆಕೆ ಮತ್ತು ಆಕೆಯ ತಂದೆ-ತಾಯಿಯನ್ನ ಜೈಲಿಗೆ ಕಳಿಸುವ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಕಾನ್ಸ್‍ಟೇಬಲ್‍ನಿಂದ ಕಿರುಕುಳ ಹೆಚ್ಚಾಗುತ್ತಿದ್ದಂತೆ ಬೇಸತ್ತ ಮಹಿಳೆ ಕಲಬುರಗಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬಸವರಾಜ್ ವಿರುದ್ಧ ಐಪಿಸಿ ಸೆಕ್ಷನ್ 354(ಎ), 504, 506 ಅಡಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಅತ್ಯಾಚಾರ ಮಾಡಿದ್ರು – ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ

Share This Article