ಮೈಸೂರು: ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದ್ದು, ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಿದೆ.
2015ರಲ್ಲಿ ಆದಿವಾಸಿಗಳ ಮಹಿಳಾ ಅಧ್ಯಯಕ್ಕಾಗಿ ಅಮೆರಿಕದಿಂದ ಬಂದಿದ್ದ ಸಂತ್ರಸ್ತೆ ಅನಾರೋಗ್ಯಕ್ಕೆ ಒಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲ್ ನರ್ಸ್ ಆಗಿದ್ದ ಆರೋಪಿ ಸುಮೀತ್ ಚಿಕಿತ್ಸೆ ನೀಡುವ ನೆಪದಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
Advertisement
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರು 7ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಶೇಖರ್ ಅವರು ಇಂದು ಮಹತ್ವದ ತೀರ್ಪು ನೀಡಿದ್ದಾರೆ. 376/2ಇ ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ಭಾರತ ದೇಶದ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೂ ಶಿಕ್ಷೆ ವಿಧಿಸಲಾಗಿದೆ.
Advertisement
ಸಂತ್ರಸ್ಥೆ ಅಮೇರಿಕಾ ರಾಯಭಾರಿ ಕಚೇರಿಯಿಂದ ಅನುಮತಿ ಪಡೆದು ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದರು. ಸಂತ್ರಸ್ತೆ ಸ್ಕೈಪ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಕುರಿತು ಮೈಸೂರಿನ ಎನ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.