ಇಸ್ಲಾಮಾಬಾದ್: ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಎರಡು ಕಡೆ ಭಯೋತ್ಪಾದಕ ದಾಳಿ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಮೊದಲು ದಾಳಿ ನಡೆದಿದ್ದು, ಜಿಲ್ಲೆಯ ಪೊಲೀಸ್ ಚೆಕ್‍ಪೋಸ್ಟ್ ಗೆ ಬೈಕಿನಲ್ಲಿ ಬಂದ ಕೆಲವು ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.
Advertisement
Advertisement
ನಂತರ ಈ ಪೊಲೀಸ್ ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಸಮಯದಲ್ಲಿ ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬಂದ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ಮಾಡಿದ್ದಾಳೆ. ಈ ದಾಳಿಯಲ್ಲಿ ಮತ್ತೆ ಇಬ್ಬರು ಪೊಲೀಸರು ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಲೀಮ್ ರಿಯಾಜ್ ಹೇಳಿದ್ದಾರೆ.
Advertisement
Advertisement
ಈ ಬಾಂಬ್ ದಾಳಿಗೆ ಸುಮಾರು ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಮತ್ತು ಆತ್ಮಾಹುತಿ ಬಾಂಬರ್ ಒಬ್ಬ ಮಹಿಳೆ ಎಂದು ತಿಳಿದು ಬಂದಿದೆ. ನಮಗೆ ಅವಳ ತಲೆಬುರುಡೆ ಮತ್ತು ಕಾಲುಗಳನ್ನು ಸಿಕ್ಕಿವೆ ಎಂದು ರಿಯಾಜ್ ಹೇಳಿದ್ದಾರೆ.
ಆತ್ಮಾಹುತಿ ಬಾಂಬ್ ಸ್ಫೋಟದ ನಂತರ ರಕ್ಷಣಾ ತಂಡಗಳು ಮೃತ ದೇಹಗಳನ್ನು ಸ್ಥಳಾಂತರ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಗಾಯಗೊಂಡರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಈ ದಾಳಿಯ ಹೊಣೆಯನ್ನು ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ ಹೊತ್ತುಗೊಂಡಿದ್ದು, ಈ ಗುಂಪಿನ ನಾಯಕ ಒಮರ್ ಖೋರಸಾನಿ ಎಂಬ ಉಗ್ರ ಪತ್ರಕರ್ತರಿಗೆ ಕಳುಹಿಸಿದ ಸಂಕ್ಷಿಪ್ತ ಸಂದೇಶದಲ್ಲಿ ಈ ದಾಳಿಯನ್ನು ನಾವೇ ಮಾಡಿದ್ದು ಎಂದು ಖಚಿತಪಡಿಸಿದ್ದಾನೆ.
ತೆಹ್ರೀಕ್ ಇ-ತಾಲಿಬಾನ್ ಎಂಬ ಉಗ್ರ ಸಂಘಟನೆ 2007 ರಲ್ಲಿ ರಚನೆಯಾದಾಗಿದ್ದು, ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗೆ ಹೋರಾಡುತ್ತಿದೆ. ಈ ಸಂಘಟನೆ ಇಸ್ಲಾಮಿಕ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ದೇಶದ ಮೇಲೆ ಹೇರುವ ಗುರಿಯನ್ನು ಹೊಂದಿದೆ.