ತುಮಕೂರು: ಜಿಲ್ಲೆಯ ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹಿಂಬದಿಯಿಂದ ಲಾರಿಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಏಳು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಅನುಷ (07), ಸವಿತಾ(20), ರತ್ನಮ್ಮ(38), ಶಂಕರ(35), ಅಶ್ವತ್ತನಾರಾಯಣ (50) ಮೃತ ದುರ್ದೈವಿಗಳು. ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಅವರು ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ದುರ್ದೈವಿಗಳು ಶಿರಾ ಹಾಗೂ ಪಟ್ಟನಾಯಕನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಶಿರಾ ರಾಷ್ಟ್ರೀಯ ಹೆದ್ದಾರಿ-48 ಬಳಿಯ ಜೈಹಿಂದ್ ಹೋಟೆಲ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಹನುಮಾನ್ ಟ್ರಾವೆಲ್ಸ್ ಬಸ್ಸಿನಲ್ಲಿ ಸುಮಾರು 30 ಮಂದಿ ದೇವಾಯಲಕ್ಕೆ ತೆರಳಿದ್ದರು. ಸಿಗಂದೂರು ಮತ್ತು ಚೌಡೇಶ್ವರಿ ದೇವಾಲಯಕ್ಕೆ ಹೋಗಿ ದರ್ಶನ ಪಡೆದು ಸಿಗಂದೂರಿನಿಂದ ಶಿರಾ ಕಡೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಶಿರಾ ಬಳಿ ಬಸ್ ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಮೂರು ಮಂದಿ ಮೃತಪಟ್ಟಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಶಿರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಘಾತದಿಂದ ಬಸ್ಸಿನಲ್ಲಿದ್ದ 20 ಮಂದಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.