Crime
ಹಾಡಹಗಲೇ ಮಹಿಳೆಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದ 7 ಜನರ ಬಂಧನ

ಹೈದರಾಬಾದ್: ಹಾಡಹಗಲೇ ನಡು ರಸ್ತೆಯಲ್ಲಿ 8 ಜನರು ಮಹಿಳೆ ಮೇಲೆ ಹಲ್ಲೆ ಮಾಡಿ ಆಕೆಯ ಬಟ್ಟೆಯನ್ನು ಹರಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜೆರ್ರಿಪೋಥಾಪಾಲೆಮ್ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಪೆಂಡುರ್ತಿ ಮಂಡಲ್ ನಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳಲ್ಲಿ 7 ಜನರನ್ನು ಆಂಧ್ರ ಪೋಲಿಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಸುಮಾರು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ಎನ್.ಟಿ.ಆರ್ ಹೌಸಿಂಗ್ ಯೋಜನೆ ಅಡಿಯಲ್ಲಿ ಭೂಮಿಯನ್ನು ದಲಿತರಿಗೆ ಹಂಚಲಾಗಿತ್ತು. ಆದ್ದರಿಂದ ಅಲ್ಲಿ ದಲಿತರ ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಮಂಗಳವಾರ ಈ ಭೂಮಿಯಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಲು ತೆಲುಗು ದೇಶಂ ಪಕ್ಷಕದ ಕಾರ್ಯಕರ್ತರು ಜೆಸಿಬಿ ತಂದು ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಸಂತ್ರಸ್ತೆ ದುರ್ಗಮ್ಮ ಮತ್ತು ಆಕೆಯ ತಾಯಿ ಅಂಕಾಮ್ಮ ಅದನ್ನು ಆಕ್ಷೇಪಿಸಿದ್ದಾರೆ. ಆದರೆ ಈ ವೇಳೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಆದರೂ ಅಗೆಯುವುದನ್ನು ಆರಂಭಿಸಿದ್ದಾರೆ. ಆಕೆ ಮತ್ತೆ ಅದನ್ನು ತಡೆಗಟ್ಟಲು ಯತ್ನಿಸಿದಾಗ ಕಾರ್ಯಕರ್ತರು ಆಕೆಯನ್ನು ಎಳೆದಾಡಿ ಬಟ್ಟೆಯನ್ನ ಹರಿದು ದೌರ್ಜನ್ಯ ಮಾಡಿದ್ದಾರೆ.
ಸಂತ್ರಸ್ತೆ ಮತ್ತು ತಾಯಿ ಕಾರ್ಯಕರ್ತರಾದ ಮದಕ ಅಪ್ಪಾಲು ರಾಜು, ವಿ.ಶ್ರೀನು, ಸಲಾಪು ಜೋಗ ರಾವ್, ರಾಪರ್ತಿ ಗಂಗಾರಾಜ್, ಮದಕಾ ಪಾರ್ವತಿ, ಎಸ್. ಗಂಗಮ್ಮ ಮತ್ತು ಎಂ. ರಾಮ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 447, 354, 323 ಹಾಗೂ ಎಸ್‍ಸಿ ಎಸ್‍ಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶದ ಎಸ್‍ಸಿ.ಎಸ್‍ಟಿ ಆಯೋಗದ ಮುಖ್ಯಸ್ಥ ಕೆ. ಶಿವಾಜಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಗೆ ಆದೇಶಿಸಿದ್ದಾರೆ.
ಇದೊಂದು ಭೂಮಿಯ ವಿವಾದವಾಗಿ ನಡೆದ ಗಲಾಟೆ ಆಗಿದೆ, ಜಾತಿ ಆಧಾರಿತವಲ್ಲ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.
