ಮಡಿಕೇರಿ: ವೈದ್ಯರಿಲ್ಲದ ಕಾರಣ ಕಳೆದ ಒಂದೇ ವಾರದಲ್ಲಿ 7 ರೋಗಿಗಳು ಸಾವನ್ನಪ್ಪಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಎದೆನೋವಿನಿಂದ ಕುಟ್ಟ ಸಾರ್ವಜನಿಕ ಆಸ್ಪತ್ರೆಗೆ ಮಣಿ (43) ದಾಖಲಾಗಿದ್ದರು. ಆದರೆ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗದೆ ಮಣಿ ಮೃತಪಟ್ಟಿದ್ದಾರೆ. ಇದರಿಂದ ಇಂದು ಸಾರ್ವಜನಿಕರು ದಿಢೀರನೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಗೋಣಿಕೊಪ್ಪದ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದ್ದು, ವಾರದಲ್ಲಿ ಎರಡು ದಿನ ಮಾತ್ರವೇ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೋಬಳಿ ಕೇಂದ್ರದಲ್ಲಿರುವ ಕುಟ್ಟ ಆಸ್ಪತ್ರೆಯನ್ನೇ ಹಲವು ಗ್ರಾಮಗಳ ಸಾವಿರಾರು ಜನರು ಆಶ್ರಯಿಸಿದ್ದಾರೆ.
ವೈದ್ಯರ ತೀವ್ರಕೊರತೆ ಇದ್ದರೂ ರಾಜಕಾರಣಿಗಳಿಗೆ ಮಾತ್ರ ಇದರ ಬಗ್ಗೆ ಪರಿವೇ ಇಲ್ಲದಂತಾಗಿದೆ. ಆದರೆ ವೈದ್ಯರಿಲ್ಲದ ಪರಿಣಾಮ ಒಂದೇ ವಾರದಲ್ಲಿ 7 ಜನರು ಸಾವನ್ನಪ್ಪಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ.