ಶಿವಮೊಗ್ಗ: ಮಲೆನಾಡಿನ ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಈ ವರ್ಷ ಮುಂಚಿತವಾಗಿ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ಮಂಗನ ಜ್ವರ ಎಂದು ಕರೆಯಲಾಗುವ ಈ ಮಹಾಮಾರಿಗೆ ಮಲೆನಾಡಿನ ಜನ ತತ್ತರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕುಗಳಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಜ್ವರ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ. ತೀರ್ಥಹಳ್ಳಿಯಲ್ಲಿ ಒಬ್ಬರು ಮತ್ತು ಸಾಗರದಲ್ಲಿ ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.
Advertisement
Advertisement
ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕಾಯಿ ಮಂಜುನಾಥ್ ಮತ್ತು ತೀರ್ಥಹಳ್ಳಿಯ ಗಂಟೆ ಜಾನಗಲು ಗ್ರಾಮದ ಸುಂದರಿ, ಕಂಚಿಕಾಯಿ ರಾಮಕ್ಕ, ಅರಕಲಗೋಡು ಗ್ರಾಮದ ಶ್ವೇತ ಎಂಬವರು ಮಂಗನ ಜ್ವರಕ್ಕೆ ತುತ್ತಾದ ದುರ್ದೈವಿಗಳು. ಈ ಜ್ವರದಿಂದ ಪೀಡಿತರಾಗಿರುವ ಐವತ್ತಕ್ಕೂ ಹೆಚ್ಚು ಜನ ಸಾಗರ, ಮಣಿಪಾಲ ಹಾಗೂ ಶಿವಮೊಗ್ಗದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವರನ್ನು ನಾವು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Advertisement
ಏನಿದು ಮಂಗನ ಕಾಯಿಲೆ?
ಕಾಡಿನಲ್ಲಿ ಮಂಗಗಳು ಸತ್ತು ಬಿದ್ದಿರುತ್ತವೆ. ಹೀಗೆ ಸತ್ತ ಮಂಗಗಳಿಂದ ಹರಡುವ ಉಣ್ಣೆಗಳು ಜಾನುವಾರು, ಕಾಡು-ತೋಟಕ್ಕೆ ಹೋದ ಮನುಷ್ಯರನ್ನು ಸೇರಿಕೊಳ್ಳುತ್ತವೆ. ಈ ಉಣ್ಣೆಯಿಂದ ಕಂಡು ಬರುವ ಜ್ವರವೇ ಮಂಗನಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡೀಸಿಸ್ ಎಂದು ಕರೆಯಲಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಮೊದಲಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಗರ ತಾಲೂಕಿಗೂ ವ್ಯಾಪಿಸಿದೆ ಎಂದು ಸ್ಥಳೀಯ ಬಸವರಾಜ್ ತಿಳಿಸಿದ್ದಾರೆ.
Advertisement
ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗುತ್ತಿತ್ತು. ಈ ಜ್ವರ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ರೆವಿನ್ಯೂ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಈ ಸಮನ್ವಯತೆಯ ಕೊರತೆಯಿಂದಾಗಿ ಈ ಬಾರಿ ಏಳು ಜನ ಬಲಿಯಾಗಿದ್ದಾರೆ. ಸಮರೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಮಲೆನಾಡಿನ ಜನರ ಜೀವ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv