ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

Public TV
3 Min Read
vishweshwar hegde kageri zameer ahmed

ಬೆಂಗಳೂರು: ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುವಾಗ ಆರ್‌ಎಸ್‍ಎಸ್‍ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಜಮೀರ್ ಒಂದು ಮಾತು ಹೇಳ್ತೀನಿ, ಮುಂದೆ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಚರ್ಚೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್, ಆಮೇಲೆ ಬಿಜೆಪಿ, ಆರ್‌ಎಸ್‍ಎಸ್‍, ಕಾಂಗ್ರೆಸ್ ಎಲ್ಲಾ ಎಂದು ತಿವಿದರು. ಆಗ ಮಧ್ಯಪ್ರವೇಶ ಮಾಡಿದ ಅಶೋಕ್ ಮತ್ತೆ ಆರ್‌ಎಸ್‍ಎಸ್‍ಗೆ ಹೋಗ್ತೀರಲ್ಲಾ ಸಾರ್..? ಎಂದು ತಿರುಗೇಟು ನೀಡಿದರು.

siddaramaiah 6

ಆ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ನೀವು ಯಾಕೆ ನಮ್ಮ ಆರ್‌ಎಸ್‍ಎಸ್‍ ಬಗ್ಗೆ ಅಷ್ಟು ಬೇಸರ ಮಾಡ್ಕೊಳ್ತೀರಿ? ಎಂದು ಹೇಳಿದರು. ಆಗ ಸಿದ್ದರಾಮಯ್ಯ ಮಾತನಾಡಿ, ಬೇಸರನೇ ಮಾಡ್ಕೊಂಡಿಲ್ಲಾ, ಆರ್‌ಎಸ್‍ಎಸ್‍ ಎನ್ನುವುದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಆರ್‍ಎಸ್‍ಎಸ್ ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸ್ಪೀಕರ್ ಹೇಳಿದರು.

ಆರ್‌ಎಸ್‍ಎಸ್‍ ಬಗ್ಗೆ ಸ್ಪೀಕರ್ ಮಾತನಾಡುತ್ತಿದ್ದಂತೆ ಎದ್ದು ನಿಂತ ಜಮೀರ್ ಅಹಮದ್ ಪೀಠ ಮೇಲೆ ಕೂತ್ಕೊಂಡು ನಮ್ಮ ಆರ್‍ಎಸ್‍ಎಸ್ ಅಂತೀರಾ ತಾವು? ಎಂದು ಟಾಂಗ್ ಕೊಟ್ಟರು. ಆಗ ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ, ಇನ್ನೇನು ಮತ್ತೆ? ನಮ್ಮ ಅರ್‍ಎಸ್‍ಎಸ್ಸೆ!. ಆರ್‍ಎಸ್‍ಎಸ್ ನಮ್ದೇ ರೀ. ಜಮೀರ್ ಒಂದು ಮಾತು ಹೇಳ್ತೀನಿ, ಇವತ್ತಲ್ಲಾ ನಾಳೆ ನಮ್ಮ ದೇಶದಲ್ಲಿ ನೀವೂ ಸಹ ನಮ್ಮ ಆರ್‍ಎಸ್‍ಎಸ್ ಎಂದು ಹೇಳಬೇಕಾಗುತ್ತದೆ. ಖಂಡಿತವಾಗಿ ಹೇಳಬೇಕಾಗುತ್ತದೆ ಎಂದು ಜಮೀರ್ ಗೆ ಸ್ಪೀಕರ್ ತಿವಿದರು.

session 1 2

ಆ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಜಮೀರ್ ಹೋಗಲಿ, ನಾನೇ ತೀರ್ಮಾನಕ್ಕೆ ಬಂದಿದ್ದೇನೆ, ಆರ್‌ಎಸ್‍ಎಸ್‍ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕೆ ವಿರೋಧ ಮಾಡುತ್ತೇವೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

ಈ ನಡುವೆ ಆರ್.ಅಶೋಕ್ ಎದ್ದು ನಿಂತು, ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ. ಈಗ ಸರ್ವವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್‌ಎಸ್‍ಎಸ್‍, ಪ್ರಧಾನಿ ಆರ್‌ಎಸ್‍ಎಸ್‍, ಉಪರಾಷ್ಟ್ರಪತಿ ಆರ್‌ಎಸ್‍ಎಸ್‍, ಮುಖ್ಯಮಂತ್ರಿಗಳು ಆರ್‌ಎಸ್‍ಎಸ್‍, ಒಪ್ಪಿಕೊಳ್ಳಲೇಬೇಕು ಈಗ ಎಂದು ಅಶೋಕ್ ಹೇಳಿದಾಗ ಇದು ದುರಾದೃಷ್ಟ ಅಂತಾ ರಾಮಲಿಂಗಾರೆಡ್ಡಿ ಕೆಣಕಿದರು.

r ashok 2

ಆಗ ಅಶೋಕ್ ದುರಾದೃಷ್ಟ ಅಲ್ಲ ಇದು, ಅದೃಷ್ಟ ಎಂದು ಮತ್ತೆ ಟಾಂಗ್ ಕೊಟ್ಟರು. ಆಗ ಜಮೀರ್ ಮತ್ತೆ ಮಧ್ಯಪ್ರವೇಶಿಸಿ ಅಶೋಕ್ ಅವರೇ ನೀವು ಬಿಜೆಪಿ ಎಂದು ಯಾಕೆ ಹೇಳುತ್ತೀರಾ, ಆರ್‌ಎಸ್‍ಎಸ್‍ ಪಕ್ಷ ಎಂದು ಹೇಳಿ, ಬಿಜೆಪಿ ತೆಗೆದು ಬಿಡಿ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

ತಕ್ಷಣವೇ ಎದ್ದ ಈಶ್ವರಪ್ಪ ಈ ದೇಶದ ಎಲ್ಲಾ ಮುಸಲ್ಮಾನರು, ಎಲ್ಲಾ ಕ್ರಿಶ್ಚಿಯನ್ನರು ಇವತ್ತಲ್ಲಾ ನಾಳೆ ಆರ್‌ಎಸ್‍ಎಸ್‍ ಆಗ್ತಾರೆ ಯಾವ ಅನುಮಾನವೂ ಇಲ್ಲ, ನಾನು ಆರ್‌ಎಸ್‍ಎಸ್‍ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಎಂದು ನೀವೇ ಹೇಳ್ತೀರಾ ಎಂದರು. ಆಗ ಕೆ.ಜೆ. ಜಾರ್ಜ್ ಮಾತನಾಡಿ, ಅದು ಆಗುವುದಿಲ್ಲ, ಸಾಧ್ಯವೇ ಇಲ್ಲ, ನೀವೇ ಇರೋದಿಲ್ಲ ಎಂದು ತಿರುಗೇಟು ಕೊಟ್ಟರು.

priyank kharge 1

ಈ ನಡುವೆ ಶಾಸಕ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶ ಮಾಡಿ ಇದೇ ಪೀಠದಲ್ಲಿ ಕುಳಿತು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆ ಎಂದು ನೀವೇ ಹೇಳಿದ್ದೀರಿ, ಅಂದು ಪೀಠದಲ್ಲಿ ಕುಳಿತು ಸಂವಿಧಾನ ಪರವಾಗಿ ಇದ್ದೀರಿ ಎಂದು ಹೇಳಿದ್ದೀರಿ, ಈಗ ಅದೇ ಪೀಠದಲ್ಲಿ ಕುಳಿತು ನೀವು ಆರ್‌ಎಸ್‍ಎಸ್‍ ಪರವಾಗಿ ಇದ್ದೀರಿ ಎಂದು ಹೇಳ್ತಿದ್ದೀರಿ, ಇದೇ ಆರ್‍ಎಸ್‍ಎಸ್‍ನವರು ರಾಮಲೀಲಾ ಮೈದಾನದಲ್ಲಿ ನೂರೈವತ್ತು ಬಾರಿ ಪ್ರತಿಭಟನೆ ಮಾಡಿ ಸಂವಿಧಾನ ಸುಟ್ಟಿದ್ದಾರೆ ಎಂದಾಗ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಹೇ ಎಲ್ಲೆಲ್ಲೋ ಹೋಗ್ತಿದ್ದೀರಿ ಪ್ರಿಯಾಂಕ್, ಸುಮ್‍ಸುಮ್ಮನೇ ಏನೇನೋ ಮಾತಾಡಬಾರದು, ಸರಿಯಲ್ಲ ಇದು, ನಿಮ್ಮ ರಾಜಕೀಯ ಇದ್ದರೆ ಹೊರಗೆ ಮಾತಾಡಿ ಎಂದು ಚರ್ಚೆಗೆ ಇತಿಶ್ರೀ ಹಾಡಿ ಭೋಜನಕ್ಕೆ ಕಲಾಪ ಮುಂದೂಡಿದರು.

Share This Article
Leave a Comment

Leave a Reply

Your email address will not be published. Required fields are marked *