ಬೆಂಗಳೂರು : ನಿಯಮ ಎಲ್ಲರಿಗೂ ಒಂದೇ. ಆದ್ರೆ ಅದ್ಯಾಕೋ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತ್ರ ಇಂದು ನಿಯಮ ಮೀರಿ ನಡೆದುಕೊಂಡಿದ್ದಾರೆ. ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದ ಭಾಸ್ಕರ್ ರಾವ್, ಪೊಲೀಸ್ ಸಮವಸ್ತ್ರದಲ್ಲಿ ವಿಧಾನಸಭೆ ಸಭಾಂಗಣ ಪ್ರವೇಶಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಇಂದು ಭಾಷಣ ಮಾಡಿದರು. ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲರನ್ನ ಸಿಎಂ ಯಡಿಯೂರಪ್ಪ, ಸ್ಪೀಕರ್ ಕಾಗೇರಿ, ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಕಾನೂನು ಸಚಿವ ಮಾಧುಸ್ವಾಮಿ ಕೆಂಪು ಹಾಸಿಗೆಯಲ್ಲಿ ಸ್ವಾಗತ ಮಾಡಿದರು. ರಾಜ್ಯಪಾಲರು ವಿಧಾನಸಭೆ ಸಭಾಂಗಣ ಪ್ರವೇಶ ಮಾಡಿದ ಕೂಡಲೇ ಸಭಾಂಗಣದ ಬಾಗಿಲು ಹಾಕಲಾಯ್ತು. ಈ ವೇಳೆ ನಗರ ಪೊಲೀಸ್ ಆಯುಕ್ತರು ಬಾಗಿಲ ಹಿಂದೆ ಸಿಲುಕಿಕೊಂಡ್ರು. ಬಳಿಕ ಒಳಗೆ ಹೋಗಲು ಭಾಸ್ಕರ್ ರಾವ್ ಬಂದರು. ಆದ್ರೆ ಮಾರ್ಷಲ್ ಗಳು ಅವರನ್ನ ಒಳಗೆ ಬಿಡಲಿಲ್ಲ. ಯಾಕೆ ಅಂತ ಮಾರ್ಷಲ್ ಗಳನ್ನ ಕೇಳಿದ್ರು. ಅದಕ್ಕೆ ನಿಯಮವನ್ನ ಮಾರ್ಷಲ್ ಗಳು ವಿವರಿಸಿದ್ರು. ಮಾರ್ಷಲ್ ಗಳ ಮಾತನ್ನ ಕೇಳದೇ ಆಯುಕ್ತರ ಪವರ್ ಎಂಬಂತೆ ವಿಧಾನಸಭೆ ಸಭಾಂಗಣವನ್ನ ಪ್ರವೇಶ ಮಾಡಿದರು.
Advertisement
Advertisement
ವಿಧಾನ ಮಂಡಲದ ನಿಯಮಗಳ ಪ್ರಕಾರ ಖಾಕಿ ಸಮವಸ್ತ್ರ ತೊಟ್ಟವರು ವಿಧಾನಸಭೆ ಸಭಾಂಗಣ ಪ್ರವೇಶ ಮಾಡುವಂತೆ ಇಲ್ಲ. ಇದಕ್ಕಾಗಿ ಅಧಿವೇಶನಕ್ಕಾಗಿ ಮಾರ್ಷಲ್ ಗಳಿಗೆ ವಿಶೇಷವಾಗಿ ಬಿಳಿ ಸಮವಸ್ತ್ರಗಳನ್ನ ನೀಡಲಾಗಿರುತ್ತೆ. ಒಂದು ವೇಳೆ ಸಮವಸ್ತ್ರ ತೊಟ್ಟು ಬರಬೇಕಾದ್ರೆ ಸಭಾಧ್ಯಕ್ಷರ ಅನುಮತಿ ಇರಬೇಕು. ಆದರೆ ಸಭಾಧ್ಯಕ್ಷರು ಯಾವುದೇ ಅನುಮತಿ ನೀಡಿರಲಿಲ್ಲ. ಹೀಗಾಗಿ ಇದು ನಿಯಮ ಉಲ್ಲಂಘನೆ ಆಗುತ್ತೆ. ಪೊಲೀಸ್ ಆಯುಕ್ತರಿಗೆ ಮಾರ್ಷಲ್ ಗಳು ನಿಯಮ ವಿವರಿಸಿದ್ರು ಕೇಳದೆ ನಿಯಮ ಮೀರಿದ್ದಾರೆ.