ಬೆಂಗಳೂರು: ಕೇವಲ ನಾಲ್ಕು ದಿನಗಳಷ್ಟೇ ನಡೆಯುವ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸಚಿವರು ಮತ್ತು ಶಾಸಕರ ಗೈರು ಎದ್ದು ಕಾಣುತ್ತಿದೆ. ಶಾಸಕರು ಹಾಗೂ ಸಚಿವರ ಗೈರು ಹಾಜರಿ ಮೂರನೇ ದಿನವಾದ ಇವತ್ತು ವಿಧಾನಸಭೆ ಕಲಾಪದಲ್ಲೂ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಇವತ್ತು ಕಲಾಪ ಆರಂಭವಾಗುತ್ತಿದ್ದಂತೆಯೇ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
Advertisement
ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬೆರಳೆಣಿಕೆಯಷ್ಟು ಸಚಿವರು, ಶಾಸಕರು ಕಲಾಪದಲ್ಲಿ ಹಾಜರಿದ್ದರು. ಕಾಂಗ್ರೆಸ್ ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮದ್ ಖಾನ್ ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನಿಯಮ 69ರಡಿ ಕಾನೂನು ಮತ್ತು ಸುವ್ಯವಸ್ಥೆ ಮೇಲಿನ ಚರ್ಚೆ ಆರಂಭಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಸದನದಲ್ಲಿ ಸಚಿವರಿಲ್ಲ. ನಾನು ಯಾರ ಮುಂದೆ ಭಾಷಣ ಮಾಡಲಿ ಅಂತ ಬೇಸರ ವ್ಯಕ್ತಪಡಿಸಿದರು. ಸಚಿವರು ಗೈರಾಗುವುದು ಎಲ್ಲ ಸರ್ಕಾರಗಳಲ್ಲೂ ರೋಗದಂತೆ ಅಂಟಿಕೊಂಡಿರುತ್ತದೆ. ಈ ಸರ್ಕಾರದ ಸಚಿವರಿಗೂ ಆ ರೋಗ ಅಂಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಸದನದಲ್ಲಿ ಸಚಿವರಾದ ಸುಧಾಕರ್ ಮತ್ತು ಸಿ.ಟಿ.ರವಿ ಮಾತ್ರ ಹಾಜರಾಗಿದ್ದರು.
Advertisement
Advertisement
ಮಾತು ಮುಂದುವರಿಸಿದ ಸಿದ್ದರಾಮಯ್ಯನವರು, ಎರಡು ದಿನದಲ್ಲೇ ಸಚಿವರು ಆಸಕ್ತಿ ಕಳೆದುಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೇಗೆಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ನೂತನ ಸಚಿವರು ತಮ್ಮ ಕಚೇರಿಗಳಿಗೆ ಪೂಜೆ ಮಾಡುತ್ತಿದ್ದಾರೆ. ನೀವು ಮಾತು ಶುರು ಮಾಡಿ, ಎಲ್ಲಾ ಸಚಿವರು ಬರುತ್ತಾರೆ ಎಂದು ಸಮರ್ಥನೆಗೆ ಮುಂದಾದರು. ಹಾಗಿದ್ರೆ ಪೂಜೆ ಮುಗಿದ ಬಳಿಕವೇ ಅಧಿವೇಶನ ಕರೆಯಬೇಕಿತ್ತು ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
Advertisement
ಅಧಿವೇಶನದಲ್ಲಿ ಶಾಸಕರು, ಸಚಿವರು ಇಲ್ಲದಿದ್ದ ಮೇಲೆ ಚರ್ಚೆ ಮಾಡಿ ಏನು ಪ್ರಯೋಜನ. ನಾವೆಲ್ಲ ಸೇರಿ ಪ್ರಜಾಪ್ರಭುತ್ವವನ್ನು ಯಶಸ್ವಿ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್, ಇದು ಎಲ್ಲಾ ಕಾಲದಲ್ಲೂ ನಿರಂತರವಾಗಿ ಕಂಡು ಬರುವ ಸಮಸ್ಯೆ. ಸದನಕ್ಕೆ ಸಚಿವರು ಶಾಸಕರು ಹಾಜರಾಗಲೇಬೇಕು. ಇದು ಸಚಿವರ ಜವಾಬ್ದಾರಿ ಕೂಡ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸ್ಪೀಕರ್ ಕಾಗೇರಿ ಸಲಹೆ ನೀಡಿದರು. ಅಷ್ಟರಲ್ಲಿ ಸದನದೊಳಗೆ ಬಂದ ಸಚಿವ ಬಸವರಾಜ ಬೊಮ್ಮಾಯಿ, ತಡವಾಗಿ ಬಂದಿದ್ದಕ್ಕೆ ಬೇಷರತ್ ಕ್ಷಮೆ ಕೇಳಿದರು. ಅಲ್ಲಿಗೆ ಸಮಾಧಾನಗೊಂಡ ಸಿದ್ದರಾಮಯ್ಯ ಚರ್ಚೆ ಮುಂದುವರೆಸಿದರು.
ಈ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಾಸಕರಾದ ರಾಮದಾಸ್ ಮತ್ತು ಎಂ.ಸಿ.ಮನಗೂಳಿ ಅವರು ಕಲಾಪಕ್ಕೆ ಗೈರು ಹಾಜರಾಗಲು ಅನುಮತಿ ಕೇಳಿರುವ ಪತ್ರಗಳನ್ನು ಸದನದ ಗಮನಕ್ಕೆ ತಂದು ಅವರ ಗೈರು ಹಾಜರಾತಿಗೆ ಸದನದ ಸಮ್ಮತಿ ಇದೆ ಎಂದು ಪ್ರಕಟಿಸಿದರು.