ಶಿವಮೊಗ್ಗ: ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ ನನ್ನ ತಾಯಿ ಸಮಾನ. ಇದಕ್ಕೆ ಯಾರದರೂ ಅವಮಾನ ಮಾಡಿದರೇ ಅವರು ರಾಷ್ಟ್ರದ್ರೋಹಿ ಎನಿಸಿಕೊಳ್ಳುತ್ತಾನೆ. ಇದನ್ನು ಈ ಮೊದಲೆ ಸ್ಪಷ್ಟಪಡಿಸಿದ್ದೇನೆ ಎಂದರು.
ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದಿದೆ. ಇಲ್ಲಿಯವರೆಗೆ ನಿಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡು ಒಂದು ವಾರ ಕಳೆದಿದ್ದೀರಿ. ಇನ್ನೂ ಒಂದು ವಾರ ಉಳಿಯುತ್ತದೆ. ಇದರಿಂದಾಗಿ ಈಗಲಾದರೂ ಜನರ ಅಭಿಪ್ರಾಯವನ್ನು ಚರ್ಚಿಸೋಣ. ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಜನಸಾಮಾನ್ಯರ ಕಷ್ಟಕ್ಕೆ, ಜ್ವಲಂತ ಸಮಸ್ಯೆ ಇವೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಿಎಂಗೆ ಸ್ವಾಭಿಮಾನ ಇದ್ದರೆ ಬಚ್ಚಲು ಬಾಯಿ ಈಶ್ವರಪ್ಪರನ್ನು ವಜಾ ಮಾಡಲಿ: ಡಿಕೆಶಿ
ಭಗವಾಧ್ವಜದ ವಿವಾದವನ್ನು ಇಲ್ಲಿಗೆ ಬಿಡಿ ಎಂದು ನಾನು ಹೇಳಲ್ಲ. ಎರಡು ಪಕ್ಷದವರು ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡೊಲ್ಲ. ವಿಧಾನಸಭೆ ಕಲಾಪದಲ್ಲಿ ಈ ವಿಷಯವನ್ನು ಕೈ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಧರಣಿ ಮಾಡ್ತಿದ್ದೇವೆ: ಯು.ಟಿ. ಖಾದರ್