ಯುಗಾದಿಯ ಹೊಸ ತೊಡಕು – ಮಾಂಸಕ್ಕಾಗಿ ಪಾಪಣ್ಣ ಮಟನ್ ಸ್ಟಾಲ್‍ಗೆ ಮುಗಿಬಿದ್ದ ಜನ

Public TV
2 Min Read
Papanna Mutton Stall

ಬೆಂಗಳೂರು: ಮಾರಕ ಕೋವಿಡ್ ವೈರಸ್‍ನ ಮೂರು ಅಲೆಗಳ ನಂತರ ಯುಗಾದಿ ಸಂಭ್ರಮ ಗರಿಗೆದರಿದೆ. ಹಬ್ಬದ ನಂತರದ ದಿನದ ಹೊಸ ತೊಡಕಿಗೆ ನಗರದ ಗ್ರಾಹಕರು ಕ್ಯೂ ನಿಂತು ಮಟನ್ ಖರೀದಿಸುವಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಬೆಳ್ಳಂ ಬೆಳಗ್ಗೆ ನಗರದ ಪ್ರಸಿದ್ಧ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜನ ಮಟನ್ ಖರೀದಿಸುತ್ತಿದ್ದಾರೆ.

Papanna Mutton Stall

ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ ಯುಗಾದಿ ಹಬ್ಬದ ನಂತರದ ದಿನ ಆಚರಿಸುವ ಹೊಸ ತೊಡಕನ್ನು ಮಾಂಸಾಹಾರಿ ಭಕ್ಷ್ಯಗಳನ್ನು ಉಣಬಡಿಸುವ ಮೂಲಕ ಸಂಭ್ರಮಿಸಲಾಗುತ್ತದೆ. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್‍ನಲ್ಲಿ ಮಟನ್ ಖರೀದಿಸುವವರ ಸಂಖ್ಯೆ ಹೆಚ್ಚು. ಸಿಲಿಕಾನ್ ಸಿಟಿಯ ಮೂಲೆ, ಮೂಲೆಗಳಿಂದಲೂ ಜನ ಸರತಿ ಸಾಲಲ್ಲಿ ನಿಂತು ಮಟನ್ ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ಮತ್ತು ತಾವು ಕೇಳಿದಂತೆ ಮಟನ್ ನೀಡುತ್ತಾರೆ ಎಂಬ ಕಾರಣಕ್ಕೆ ಬೆಲೆ ಕೊಂಚ ಹೆಚ್ಚಾದರೂ ಗ್ರಾಹಕರು ಇಲ್ಲಿ ಸರತಿ  ಸಾಲಲ್ಲಿ ನಿಂತು ಮಟನ್ ಖರೀದಿಸುವುದು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು

Papanna Mutton Stall

74 ವರ್ಷಗಳ ಇತಿಹಾಸವಿರುವ ಪಾಪಣ್ಣ ಮಟನ್ ಸ್ಟಾಲ್: ಪಾಪಣ್ಣ ಮಟನ್ ಸ್ಟಾಲ್ ಸಿಬ್ಬಂದಿ, ಗ್ರಾಹಕರು ಮತ್ತು ವ್ಯಾಪರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ  ಮುಂಜಾಗ್ರತೆ ವಹಿಸಿ ಸಕಲ ರೀತಿಯ ಸಿದ್ಧತೆ ನಡೆಸಿದ್ದರು. ಸುಮಾರು 74 ವರ್ಷಗಳ ಇತಿಹಾಸವಿರುವ ಪಾಪಣ್ಣ ಮಟನ್ ಸ್ಟಾಲ್ ಮೂರು ತಲೆಮಾರಿನಿಂದ ನಡೆದುಕೊಂಡು ಬಂದಿದೆ. ಪ್ರಸ್ತುತ ಪಾಪಣ್ಣರ ಮೊಮ್ಮಗ ರೋಹಿತ್ ಅಂಗಡಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

1,500 ಕಿಲೋ ಮಟನ್ ಮಾರಾಟ: ಪಾಪಣ್ಣ ಮಟನ್ ಸ್ಟಾಲ್‍ನಲ್ಲಿ ಜನ ಏಕೆ ಮುಗಿಬಿದ್ದು ಮಾಂಸ ಖರೀದಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿ ಗುಣಮಟ್ಟಕ್ಕಷ್ಟೇ ಬೆಲೆ. ಆಯ್ದ ಮತ್ತು ಉತ್ತಮ ಗುಣಮಟ್ಟದ ಕುರಿಗಳನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಇಲ್ಲಿನ ಸಿಬ್ಬಂದಿ ಕುರಿಗಳನ್ನು ಕನಕಪುರ, ರಾಮನಗರ, ಗೌರಿಬಿದನೂರು ಮತ್ತು ಮಾಗಡಿಯಿಂದ ಆರಿಸಿ ತರುತ್ತಾರೆ. ಪ್ರತಿ ವರ್ಷ ಈ ದಿನ ಸರಾಸರಿ 1,500 ಕಿಲೋ ಮಟನ್ ಅನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ರೋಹಿತ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *