Bengaluru CityDistrictsKarnatakaLatestMain Post

ರಾಯಣ್ಣರ ಪ್ರತಿಮೆಗೆ ಕೈ ಇಟ್ಟವರ ಮೇಲೆ ಕರುಣೆ ಯಾಕೆ?: ಹೆಚ್‍ಡಿಕೆ

ಬೆಂಗಳೂರು: ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ನಮ್ಮ ರಾಯಣ್ಣರ ಪ್ರತಿಮೆ ಮೇಲೆ ಕೈ ಇಟ್ಟವರ ಮೇಲೆ ಕರುಣೆ ಯಾಕೆ? ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮುಖದ ಭಾಗ, ಮೂಗು ಮತ್ತು ಕತ್ತಿಯನ್ನು ಕಿಡಿಗೇಡಿಗಳು ಶನಿವಾರದ ಮುಂಜಾವಿನಲ್ಲಿ ವಿರೂಪಗೊಳಿಸಿದ್ದರು. ರಾಯಣ್ಣ ಹಿಡಿದಿದ್ದ ಕಠಾರಿಯನ್ನು ರಸ್ತೆಯ ಬದಿಗೆ ಎಸೆದಿದ್ದರು. ಸದ್ಯ ಈ ಕುರಿತಂತೆ ರಾಷ್ಟ್ರೀಯ ಪಕ್ಷಗಳ ವಿರುದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದ್ದಾರೆ.ದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

 

ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿ ನಡೆದ ವಿಕೃತಿ ಬಗ್ಗೆ, ಕನ್ನಡಿಗರ ಹೆಮ್ಮೆ ಸಂಗೊಳ್ಳಿ ರಾಯಣ್ಣ ಅವರಿಗಾದ ಅಪಚಾರದ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಬದ್ಧತೆ ಬಗ್ಗೆ ಈಗ ಪ್ರಶ್ನೆ ಉಂಟಾಗಿದೆ ಎಂದಿದ್ದಾರೆ.

ಮಾತೆತ್ತಿದರೆ ರಾಷ್ಟ್ರದ ಸಮಗ್ರತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕವು 30 ರಾಜ್ಯಗಳಲ್ಲಿ ಒಂದು ರಾಜ್ಯವಷ್ಟೆ. ಕನ್ನಡವು ದೇಶ ಭಾಷೆಗಳಲ್ಲಿ ಒಂದು ಭಾಷೆ ಮಾತ್ರ. ಆದರೆ ನಮಗೆ ಕರ್ನಾಟಕವೇ ಕರ್ಮಭೂಮಿ. ಕನ್ನಡವೇ ತಾಯಿ. ನಾವು ಕನ್ನಡಮ್ಮನ ಕರುಳಬಳ್ಳಿಗಳು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಕೇವಲ ಚುನಾವಣೆ ಬಂದಾಗ ವೋಟ್ ಮಾಡುವ ಮತಯಂತ್ರ ಹಾಗೂ ತೆರಿಗೆ ರೂಪದಲ್ಲಿ ಕೇಂದ್ರದ ಖಜಾನೆ ತುಂಬುವ ಅಕ್ಷಯ ಪಾತ್ರೆ. ಆದರೆ ನಮಗೆ ನೆರೆ, ಬರ ಬಂದಾಗ ಅವರ ಮುಂದೆಯೇ ಭಿಕ್ಷೆಗೆ ನಿಲ್ಲಬೇಕು! ಇದೆಂಥಾ ವಿಪರ್ಯಾಸ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ಗಡಿ, ಭಾಷೆ, ಜಲದ ಪ್ರಶ್ನೆ ಬಂದಾಗ ಆ ಪಕ್ಷಗಳ ಆದ್ಯತೆ ಕನ್ನಡ-ಕರ್ನಾಟಕ ಅಲ್ಲ. ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಬಂದವರನ್ನು ಸಹಿಸಿಕೊಳ್ಳುತ್ತಿದ್ದೇವೆ. ಕನ್ನಡಿಗರ ತೆರಿಗೆ ಹಣದಲ್ಲಿ ಜಾರಿ ಮಾಡಿದ ಯೋಜನೆ, ರಸ್ತೆ, ಸೇತುವೆಗಳಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿದವರ ಹೆಸರಿಟ್ಟು ಔದಾರ್ಯ ತೋರುತ್ತಿದ್ದೇವೆ. ಇದು ಇನ್ನೆಷ್ಟು ದಿನ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯ ಒಂದು ಹಳ್ಳಿಯಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅದೇ ಬ್ರಿಟಿಷರು ಬಿಗಿದ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಸಂಗೊಳ್ಳಿ ರಾಯಣ್ಣ ಅವರನ್ನು ಅಪಮಾನಿಸುತ್ತಾರೆ. ಅದೇ ಮೊಘಲರ ವಿರುದ್ಧ ಹೋರಾಡಿದ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ? ರಾಷ್ಟ್ರಪ್ರೇಮದಲ್ಲೂ ಬೇಧ ಭಾವವೇ? ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ:  ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ

2006ರಲ್ಲಿ ಶಿವಸೇನೆ-ಎಂಇಎಸ್ ಗಡಿತಂಟೆ ಮಾಡಿದಾಗ, ಆಗ ಕೇಂದ್ರದಲ್ಲಿ ಗೃಹಮಂತ್ರಿಯಾಗಿದ್ದ ಅದೇ ರಾಜ್ಯದ ನಾಯಕರು ಬೆಳಗಾವಿ ಮೇಲೆ ಕಣ್ಣು ಹಾಕಿದಾಗ, ಅಲ್ಲಿ ವಿಧಾನಕಲಾಪ ನಡೆಯಿತು. ಸುವರ್ಣಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆಯೂ ಆಯಿತು. ಇದು ಕನ್ನಡದ ಒಂದು ಸಣ್ಣ ಪಕ್ಷಕ್ಕೆ ಇದ್ದ ಬದ್ಧತೆ. ಈ ಎದೆಗಾರಿಕೆ ರಾಷ್ಟ್ರೀಯ ಪಕ್ಷಗಳಿಗೆ ಏಕಿಲ್ಲ? ಎಂದಿದ್ದಾರೆ.

ನಮ್ಮ ರಾಯಣ್ಣರ ಪ್ರತಿಮೆ ಮೇಲೆ ಕೈ ಇಟ್ಟವರ ಮೇಲೆ ಕರುಣೆ ಯಾಕೆ? ಎಂಇಎಸ್ ಬಗ್ಗೆ ಎರಡು ನಾಲಗೆಯಲ್ಲಿ ಮಾತನಾಡುವ ಕೈಚಳಕದ ಮರ್ಮವೇನು? ಮಸೂದೆಗಳನ್ನು ಇಟ್ಟುಕೊಂಡು ಕನ್ನಡದ ಆಸ್ಮಿತೆಯ ಮೇಲಾದ ದಾಳಿಯನ್ನು ವಿಷಯಾಂತರ ಮಾಡುವ ಹುನ್ನಾರ ಏಕೆ? ಕನ್ನಡಿಗರ ಹೆಮ್ಮೆ ಸಂಗೊಳ್ಳಿರಾಯಣ್ಣ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Back to top button