ಈ ವರ್ಷದ ಆರಂಭದಲ್ಲೇ ನಿವೃತ್ತ ಮುಖ್ಯ ನ್ಯಾ. ಮಿಶ್ರಾ ವಿರುದ್ಧ ಜಡ್ಜ್ ಗಳೇ ಬಂಡಾಯ ಎದ್ದ ಪರಿಣಾಮ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ದೃಢಪಟ್ಟಿತ್ತು. ವೃತ್ತಿ ಜೀವನದ ಕೊನೆಯಲ್ಲಿ ದೀಪಕ್ ಮಿಶ್ರಾ ಅವರಿದ್ದ ಪೀಠ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿತ್ತು.
ಸಲಿಂಗಕಾಮ ಅಪರಾಧವಲ್ಲ:
ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.
Advertisement
Advertisement
ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.
Advertisement
ಅಕ್ರಮ ಸಂಬಂಧ ಅಪರಾಧವಲ್ಲ:
ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‍ನ ಸಂವಿಧಾನಿಕ ಪೀಠ ಮಹತ್ವದ ತೀರ್ಪುನ್ನು ಸೆಪ್ಟೆಂಬರ್ 27ರಂದು ನೀಡಿತು. ಐಪಿಸಿ ಸೆಕ್ಷನ್ 497ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧವಾಗಿತ್ತು. ಸಂವಿಧಾನದ 14ನೇ ವಿಧಿಯ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಹಿನ್ನಲೆಯಲ್ಲಿ ಸೆಕ್ಷನ್ 497 ಅನ್ನು ರದ್ದುಪಡಿಸಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠ ಈ ಆದೇಶವನ್ನು ನೀಡಿತ್ತು.
Advertisement
ಶಬರಿಮಲೆಗೆ ಮಹಿಳೆಯರ ಪ್ರವೇಶ:
10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಈಗಲೂ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದವೇ ಆಗಿ ಉಳಿದುಕೊಂಡಿದೆ. ಇದಕ್ಕೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಎಂದು ಹೇಳಿದ್ದರು.
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪಟ್ಟು!
ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲವೆಂದು 1994ರಲ್ಲಿ ನ್ಯಾ. ಇಸ್ಮಾಯಿಲ್ ಫಾರೂಕಿ ನೇತೃತ್ವದ ಪೀಠವು ತೀರ್ಪು ನೀಡಿತ್ತು. ಈ ತೀರ್ಪಿನ ಪರಿಶೀಲನೆಗಾಗಿ ಪ್ರಕರಣವನ್ನು ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸೆಪ್ಟಂಬರ್ 27ರಂದು ನಮಾಜ್ ಮಾಡಲು ಮಸೀದಿ ಬೇಕಾಗಿಲ್ಲ ಎಂದು ಹೇಳಿ ಫಾರೂಕಿ ತೀರ್ಪನ್ನು ಎತ್ತಿಹಿಡಿಯಿತು. ಈ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿದ್ದರಿಂದ ಅಕ್ಟೋಬರ್ 29ರಿಂದ ಅಯೋಧ್ಯೆ ಅರ್ಜಿಯ ಅಂತಿಮ ವಿಚಾರಣೆ ನಡೆಸಲಾಗುತ್ತದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಮತ್ತಷ್ಟು ಹಚ್ಚಾಯಿತು. ಈ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ಪೀಠ ಅಯೋಧ್ಯೆ ತೀರ್ಪು ಮಾತ್ರವೇ ನಮಗೆ ಮುಖ್ಯವಲ್ಲ. ನಮಗೆ ನಮ್ಮದೇ ಆದ ಆಧ್ಯತೆಗಳಿವೆ ಎಂದು ಹೇಳಿ ಆದೇಶ ಪ್ರಕಟಿಸಿತು. ಈ ಆದೇಶದಿಂದ ಹಿಂದೂ ಸಂತರು ಮತ್ತು ಸಂಘಟನೆಗಳು ಮೋದಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿವೆ.
ಆಧಾರ್‌ಗೆ ಬಲ:
ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆಧಾರ್‍ಗೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯಿತು. ಭಾರತದ ಪ್ರತಿಯೊಬ್ಬ ನಾಗಕರಿಕನಿಗೂ ವಿಶಿಷ್ಟ ಗುರುತಿನ ಚೀಟಿ, ಸಂಖ್ಯೆ ನೀಡುವ ಉದ್ದೇಶದಿಂದ ಯುಪಿಎ ಸರ್ಕಾರವು, 2009ರಲ್ಲಿ ಯುಪಿಎ ಸರ್ಕಾರ ಆಧಾರ್ ಪ್ರಾಧಿಕಾರ ಸ್ಥಾಪನೆ ಮಾಡಿ ಆಧಾರ್ ಕಾರ್ಡ್ ನೀಡಲು ಆರಂಭಿಸಿತ್ತು. ಕರ್ನಾಟಕ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಎಂಬವರು 2012ರಲ್ಲಿ `ಆಧಾರ್’ನ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ರಫೇಲ್ ಹಗರಣ:
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಹೀಗಾಗಿ ಈ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ಎಲ್ಲ ಅರ್ಜಿಗಳನ್ನು ಕ್ರೋಢಿಕರಿಸಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಫೇಲ್ ಹಗರಣ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಡಿಸೆಂಬರ್ 14ರಂದು ಮಹತ್ವದ ತೀರ್ಪು ನೀಡಿತ್ತು. ಈ ಆದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿತು. ನ್ಯಾಯಾಲಯಕ್ಕೆ ಕೇಂದ್ರ ತಪ್ಪು ಮಾಹಿತಿ ನೀಡಿದೆ. ಹೀಗಾಗಿ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಿದೆ ಎಂದು ಹೇಳಿ ಕಾಂಗ್ರೆಸ್ ನಾಯಕರು ಈಗ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಮಿಶ್ರಾ ವಿರುದ್ಧ ಸುದ್ದಿಗೋಷ್ಠಿ:
ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯನ್ನು ನಡೆಸಿ ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದರು. ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನ್ಯಾ. ಚೆಲ್ಮೇಶ್ವರ್ ಅವರು ನ್ಯಾಯಾಂಗ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv