ಬಳ್ಳಾರಿ: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಇಡೀ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅಲ್ಲದೇ ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಇತ್ತ 15 ದಿನಗಳ ಅಂತರದಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed) ನಾಪತ್ತೆಯಾಗಿದ್ದಾರೆ. ಇದರಿಂದ ಸಚಿವರ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.
ಬಳ್ಳಾರಿಯ (Ballary) ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲಿಯವರೆಗೂ ಐವರು ಬಾಣಂತಿಯರು ಸಾವನ್ನಪ್ಪಿದ್ದು, ಅನಾರೋಗ್ಯದ ಕಾರಣದಿಂದಲೇ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಇನ್ನೊಂದು ಕಡೆ ಜಿಲ್ಲೆಯ ಜನಪ್ರತಿನಿಧಿಗಳು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೂಡ ಎಚ್ಚರಿಸಿಲ್ಲ. ಇಷೆಲ್ಲಾ ಆದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ: ಬಾರ್ ಲೈಸೆನ್ಸ್ ನೀಡಲು 20 ಲಕ್ಷಕ್ಕೆ ಬೇಡಿಕೆ ಆರೋಪ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ನ.9 ರಂದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸರೀನ್ ಹೆರಿಗೆ ಬಳಿಕ ನಂದಿನಿ, ಲಲಿತಮ್ಮ, ರೋಜಾ ಹಾಗೂ ಮುಸ್ಕಾನ್ ಎನ್ನುವ ನಾಲ್ವರು ಬಾಣಂತಿಯರ ಸಾವಾಗಿತ್ತು. ಒಂದೇ ಬಾರಿಗೆ ಸಿಜೇರಿಯನ್‌ಗೆ ಒಳಗಾಗಿದ್ದ ಬಾಣಂತಿಯರ ಮರಣದ ಬಳಿಕವೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದೀಗ ಮತ್ತೋರ್ವ ಬಾಣಂತಿಯ ಸಾವಾಗಿದೆ.
15 ದಿನಗಳ ಅಂತರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೇ ನಿನ್ನೆ (ನ.27) ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿಎಸ್‌ಪುರ ಗ್ರಾಮದ 20 ವರ್ಷದ ಮಹಾಲಕ್ಷ್ಮಿಗೆ ನಾರ್ಮಲ್ ಹೆರಿಗೆ ಮಾಡಲಾಗಿತ್ತು. ಆದರೆ ಹೆರಿಗೆ ಬಳಿಕ ತೀವ್ರ ರಕ್ತಸ್ರಾವ ಹಾಗೂ ನಂಜಾಗಿ ಬಾಣಂತಿ ಸಾವನ್ನಪ್ಪಿದ್ದಾಳೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವಲ್ಲದೇ ಬೇರೇನೂ ಅಲ್ಲ. ಇನ್ನೂ ಜಿಲ್ಲೆಯಲ್ಲಿ ಸರಣಿ ಬಾಣಂತಿಯರ ಸಾವು ಸಂಭವಿಸುತ್ತಿದ್ದರೂ ಉಸ್ತುವಾರಿ ಸಚಿವ ಜಮೀರ್ ಮಾತ್ರ ಜಿಲ್ಲೆ ಕಡೆ ಮುಖ ಮಾಡಿಲ್ಲ. ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎನ್ನುವ ಸಂದೇಶವನ್ನ ಕಳಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ. ಒಟ್ಟಿನಲ್ಲಿ ಬಾಣಂತಿಯರ ಸಾವಿಗೆ ಅಸಲೀ ಕಾರಣ ಬಟಾಬಯಲಾಗಬೇಕಿದೆ.ಇದನ್ನೂ ಓದಿ: 4ನೇ ಬಾರಿಗೆ ಜಾರ್ಖಂಡ್ ಸಿಎಂ ಆಗಿ ಇಂದು ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ