ಬಾಗಲಕೋಟೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಯಿತು.
ಮುಧೋಳ ನಗರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕ ಧ್ವಜವನ್ನು ಬಿಟ್ಟು ಹೊಸ ಧ್ವಜವನ್ನು ರಚಿಸಿ ಧ್ವಜಾರೋಹಣ ನಡೆಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.
Advertisement
Advertisement
ಸೆಪ್ಟೆಂಬರ್ 23 2018 ರಂದು ಬಾಗಲಕೋಟೆ ನಗರದಲ್ಲಿ ಹೋರಾಟ ಸಮಿತಿ ಸದಸ್ಯರು ಪಂಚನಿರ್ಣಯ ಕೈಗೊಂಡಿದ್ದರು. ಆಗ ಜನವರಿ 1ರಂದು ಪ್ರತ್ಯೇಕ ಧ್ವಜಾರೋಹಣದ ಮಾಡಬೇಕು ಎಂದು ಹೋರಾಟಗಾರರು ನಿರ್ಧರಿಸಿದ್ದರು. ಇಂದು ಧ್ವಜಾರೋಹಣ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
Advertisement
ಈ ಪ್ರತ್ಯೇಕ ಧ್ವಜವು 4 ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ಉತ್ತರ ಕರ್ನಾಟಕದ ನಕ್ಷೆಯನ್ನು ಒಳಗೊಂಡಿದೆ. ಕೇಸರಿ, ಹಳದಿ, ಹಸಿರು ಬಣ್ಣದ ಮಧ್ಯೆ ನೀಲಿ ವರ್ಣದ ಉತ್ತರ ಕರ್ನಾಟಕ ನಕ್ಷೆಯ ಧ್ವಜವನ್ನು ಅನಾವರಣ ಮಾಡಲಾಗಿದೆ. ಈ ಪ್ರತ್ಯೇಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿದಂತೆ ಇತರೇ ಹೋರಾಟಗಾರರು ಭಾಗಿಯಾಗಿದ್ದರು.
Advertisement
ಒಟ್ಟು ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಒಳಗೊಂಡ ನಕ್ಷೆಯನ್ನು ಧ್ವಜದ ಮಧ್ಯೆ ರೂಪಿಸಲಾಗಿದೆ. ಹಾಗೆಯೇ ಕೇಸರಿ ಬಣ್ಣ ಧೈರ್ಯ, ಶೌರ್ಯದ ಸಂಕೇತವಾದರೆ, ಹಳದಿ ಹೊಸತನದ ಸಂಕೇತ, ಹಸಿರು ಸಮೃದ್ಧಿಯ ಸಂಕೇತ ಹಾಗೂ ನೀಲಿ ವಿಶಾಲತೆಯ ಸಂಕೇತ ಎಂದು ಹೊಸ ಧ್ವಜದಲ್ಲಿ ಬಳಸಿರುವ ಬಣ್ಣಗಳ ಕುರಿತು ಹೋರಾಟಗಾರರು ತಿಳಿಸಿದರು.
ಈ ವೇಳೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಭಾಷಣ ಮಾಡಿ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಹೀಗೆ ನೂತನ ಧ್ವಜವನ್ನು ಸೃಷ್ಟಿಸಿ ಧ್ವಜಾರೋಹಣ ಮಾಡಿದ್ದೇವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ. ಆಗ ಇಲ್ಲಿನ ಮನೆ ಮನೆಯಲ್ಲೂ ಈ ಧ್ವಜವನ್ನು ಹಾರಿಸೋಣ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv