ನವದೆಹಲಿ: ನನ್ನ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಹಲವು ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಬಜೆಟ್ ನಲ್ಲಿ ನಿಧಿ ಹಂಚುವ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಬಿಜೆಪಿ ನಾಯಕ ಯಡಿಯೂರಪ್ಪ ದುರುದ್ದೇಶಪೂರಿತ ಪ್ರಚಾರದ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ನಮ್ಮ ಬೆಂಬಲವಿಲ್ಲ ಹಾಗೂ ನಾನು ಮತ್ತು ನನ್ನ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಇದು ಎಂದಿಗೂ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.
Advertisement
ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಬಿಜೆಪಿಯೂ ಸರ್ಕಾರ ರಚನೆ ಮಾಡಲಾಗದೇ ಹೋದದ್ದಕ್ಕೆ ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರಿಗೆ ನಿರಾಸೆಯಾಗಿದೆ. ಆದ್ದರಿಂದಲೇ ಅವರು ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ಕರ್ನಾಟಕಕ್ಕಾಗಿ ಪ್ರಚೋದನೆ ಕೊಡುತ್ತಿದ್ದಾರೆ. ಅಲ್ಲದೆ ರಾಜ್ಯ ಬಜೆಟ್, ರೈತರ ಸಾಲ ಮನ್ನಾ ಹಾಗೂ ಇತರೆ ವಿಚಾರಗಳನ್ನಿಟ್ಟುಕೊಂಡು ಜನರನ್ನು ಪ್ರಚೋದಿಸುತ್ತಿದ್ದಾರೆ. ಇವೆಲ್ಲವೂ ರಾಜಕೀಯ ಲಾಭಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದಾರೆ.
Advertisement
ಬಿಎಸ್‍ವೈ ಹೇಳಿದ್ದು ಏನು?
ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ ರೂಪಿಸಿದೆ. ಈ ಹಿಂದೆ ವೀರಶೈವ, ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಯಡಿಯೂರಪ್ಪ ಹೇಳಿದ್ದರು.