ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ರೂಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ 9 ಜನರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು ದೇಶದಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಮರ್ಥಿಸಿದ್ದು ಹೀಗೆ:
ಪ್ರತ್ಯೇಕ ಕನ್ನಡ ಧ್ವಜವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧ್ವಜದ ಬಗ್ಗೆ ಕೂಗು ಕೇಳಿಬಂದಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ವರದಿ ಬಳಿಕ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
Advertisement
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕರ್ನಾಟಕದ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡ ಎಂದು ಬಿಜೆಪಿಯವರು ಹೇಳಿಕೆ ನೀಡಲಿ. ಬಿಜೆಪಿ ಇಂಥಹ ವಿಚಾರದಲ್ಲಿ ಅಪಪ್ರಚಾರ ಮಾಡುವುದಕ್ಕೆ ಇರುವುದು. ಚುನಾವಣೆ ಸಮಯದಲ್ಲಿ ಪ್ರತ್ಯೇಕ ಧ್ವಜ ಸ್ಥಾಪನೆ ಮಾಡಲು ಸಮಿತಿಯನ್ನು ನಾನು ರಚನೆ ಮಾಡಿಲ್ಲ. ಎಲೆಕ್ಷನ್ ಇರುವುದು ಮುಂದಿನ ಮೇ ತಿಂಗಳಿನಲ್ಲಿ. ನಾಳೆ ನಾಡಿದ್ದು ಅಲ್ಲ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಇರಬಾರದು ಸಂವಿಧಾನದಲ್ಲಿ ತಿಳಿಸಿದೆಯಾ? ಪ್ರತ್ಯೇಕ ಧ್ವಜದ ಬಗ್ಗೆ ಸಂವಿಧಾನದಲ್ಲಿ ಏನಿದೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಸಮಿತಿಯಲ್ಲಿ ಯಾರು ಇರುತ್ತಾರೆ?
ನಾಡ ಧ್ವಜ ರೂಪಿಸುವ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಇದರ ಜೊತೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಂಪಿ ಕನ್ನಡ ವಿವಿ ಕುಲಸಚಿವರು ಸದಸ್ಯರಾಗಿರುತ್ತಾರೆ. ಉಳಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
Advertisement
ಆರ್‍ಎಸ್‍ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಲಿ:
ಎಐಸಿಸಿ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ನಾಗಪುರದ ಆರ್‍ಎಸ್‍ಎಸ್ ಕಚೇರಿಯಲ್ಲಿ ಮೊದಲು ರಾಷ್ಟ್ರಧ್ವಜ ಹಾರಿಸಲಿ. ಬಿಜೆಪಿಯವರಿಂದ ನಾವು ರಾಷ್ಟ್ರಪ್ರೇಮ ಕಲಿಯುವ ಅಗತ್ಯವಿಲ್ಲ, ರಾಜ್ಯದ ಸಾಹಿತಿಗಳ ಒತ್ತಾಯದ ಮೇರೆಗೆ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
Advertisement
ಬೇರೆಡೆ ಸೆಳೆಯಲು ತಂತ್ರ:
ರಾಜ್ಯದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರದ ವೈಫಲ್ಯವನ್ನು ಮರೆಮಾಚಲು ಸರ್ಕಾರ ಈ ಕೆಲಸ ಮಾಡುತ್ತಿದೆ. ಬೇರೆ ಬಾವುಟ ಮಾಡುವ ಯಾವುದೇ ನಿಯಮವಿಲ್ಲ. ದೇಶಕ್ಕೆ ಒಂದೇ ಬಾವುಟ ಬೇರೆ ಬಾವುಟಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸರ್ಕಾರದ ನಡೆ ಅಕ್ಷ್ಯಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾನೂನು ಏನು ಹೇಳುತ್ತೆ?
ಪ್ರಸ್ತುತ ಭಾರತದಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವಿಲ್ಲ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2012ರಲ್ಲಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಬಜೆಟ್ ಮಂಡಿಸುವ ವೇಳೆ ಸುತ್ತೋಲೆ ಹೊರಡಿಸಿದ್ದರು. ಈ ಮಧ್ಯೆ ವಕೀಲ ಪ್ರಕಾಶ್ ಶೆಟ್ಟಿ ಎಂಬುವರು ಕನ್ನಡ ಧ್ವಜವನ್ನು ದುರ್ಬಳಕೆ ಆಗುತ್ತಿರುವ ಬಗ್ಗೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ಕನ್ನಡ ನಾಡಿಗೆ ಅಧಿಕೃತವಾದ ಧ್ವಜ ಇಲ್ಲ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು. ಅಷ್ಟೇ ಅಲ್ಲದೇ ಕನ್ನಡ ನಾಡಿಗೆಂದು ಅಧಿಕೃತ ಧ್ವಜ ಇಲ್ಲ. ಖಾಸಗಿಯವರು ಭಾವನಾತ್ಮಕವಾಗಿ ಧ್ವಜವನ್ನು ಹಾರಿಸುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರು.
ಕಾನೂನು ಪಂಡಿತರು ಏನ್ ಹೇಳ್ತಾರೆ?
ರಾಜ್ಯಕ್ಕೆಂದೇ ಪ್ರತ್ಯೇಕ ಧ್ವಜವನ್ನು ರೂಪಿಸುವ ಬಗ್ಗೆ ಸಂವಿಧಾನದಲ್ಲಿ ವಿಶೇಷವಾಗಿ ಉಲ್ಲೇಖವಾಗಿಲ್ಲ. ಆದರೆ ರಾಷ್ಟ್ರಧ್ವಜಕ್ಕಿಂತ ಕಡಿಮೆ ಎತ್ತರದಲ್ಲಿ ರಾಜ್ಯಧ್ವಜ ಹಾರಿಸಬೇಕಾಗುತ್ತದೆ. ರಾಜ್ಯಧ್ವಜ ಕಡಿಮೆ ಎತ್ತರದಲ್ಲಿ ಹಾರಿಸಿದರೆ ರಾಷ್ಟ್ರಧ್ವಜಕ್ಕೆ ಅವಮಾನ ಆಗುವುದಿಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ಅಸಮಾಧಾನ:
ಸಿದ್ದರಾಮಯ್ಯ ಸರ್ಕಾರದ ಈ ನಿರ್ಧಾರಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ವಿಶೇಷವಾಗಿ ಕಾಂಗ್ರೆಸ್ ಹಿರಿಯ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
Congress leadership unhappy with Karnataka government's state flag decision: Sources
— ANI (@ANI) July 18, 2017
#WATCH: Congress leader Pradeep Bhattacharya condemns demand for a separate flag for Karnataka #CongSnubsTricolour pic.twitter.com/FGZzSgNX5b
— TIMES NOW (@TimesNow) July 18, 2017
ಕರ್ನಾಟಕ ಧ್ವಜದ ಹಿನ್ನೆಲೆ:
1950ರಲ್ಲಿ ಭಾರತ ಗಣರಾಜ್ಯವಾಯಿತು. ಈ ವೇಳೆ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಸುದೀರ್ಘ ಹೋರಾಟದಿಂದ 1956ರಲ್ಲಿ ಕರ್ನಾಟಕದ ಏಕೀಕರಣವಾಯ್ತು. ಮದ್ರಾಸ್, ಹೈದರಾಬಾದ್, ಮುಂಬೈ ಭಾಗದ ಕನ್ನಡ ಮಾತನಾಡೋ ಪ್ರಾಂತ್ಯಗಳೆಲ್ಲಾ ಸೇರಿ `ಮೈಸೂರು ರಾಜ್ಯ’ ಉದಯವಾಯಿತು. ನಂತರ 1973ರಲ್ಲಿ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೇ ಮೈಸೂರು ಭಾಗಗಳನ್ನುಮೈಸೂರಿಗೆ `ಕರ್ನಾಟಕ’ ಅಂತ ಮರುನಾಮಕರಣ ಮಾಡಲಾಯಿತು. 1960ರಲ್ಲಿ ಹೋರಾಟಗಾರ ಮಾ.ರಾಮಮೂರ್ತಿ ಅವರು ಅಶಿನ-ಕುಂಕುಮ ಧ್ವಜವನ್ನು ರೂಪಿಸಿದ್ದರು.
ಸರ್ಕಾರದ ನಿರ್ಧಾರ ವಿವಾದವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು ಫೇಸ್‍ಬುಕ್ ನಲ್ಲಿ ಈ ವಿಚಾರದ ಬಗ್ಗೆ ಪೋಸ್ಟ್ ಪ್ರಕಟಿಸಿ ಯಾಕೆ 9 ಜನರ ಸಮಿತಿಯನ್ನು ರಚಿಸಿದ್ದೇವೆ ಎನ್ನುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಾಡಧ್ವಜದ ಕುರಿತು ಅನಗತ್ಯ ವಿವಾದವನ್ನು ಎಬ್ಬಿಸಲು ಕೆಲಶಕ್ತಿಗಳು ಮುಂದಾಗುತ್ತಿರುವುದು ಖಂಡನೀಯ. ಈ ಕುರಿತು ಸರ್ಕಾರ ಸ್ಪಷ್ಟ ಹಾಗೂ ಖಚಿತ ನಿಲುವನ್ನು ಹೊಂದಿದೆ. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಡಾ. ಪಾಟೀಲ ಪುಟ್ಟಪ್ಪ ಅವರೂ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಪರಿಶೀಲನೆಗೆ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದೆ. ಆ ಸಮಿತಿ ನೀಡುವ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ನಮ್ಮ ರಾಜ್ಯದಲ್ಲಿ ಈಗಾಗಲೇ ನಾಡಗೀತೆ ಅಧಿಕೃತವಾಗಿ ಇದೆ. ಅದೇ ರೀತಿ ನಾಡ ಧ್ವಜ ಇದ್ದರೆ ತಪ್ಪೇನೂ ಇಲ್ಲ. ಆದರೆ ಸರ್ಕಾರ ಈ ವಿಚಾರದಲ್ಲಿ ಪ್ರಸ್ತುತ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು. ಆದರೆ ಈ ವಿಚಾರಕ್ಕೆ ವಿವಾದದ ಸ್ವರೂಪ ನೀಡುವ ಪ್ರಯತ್ನ ನಡೆದಿದೆ. ಬಿಜೆಪಿ ನಾಯಕರು ಇಂಥ ವಿಷಯದಲ್ಲಿ ಅಪ ಪ್ರಚಾರ ಮಾಡುವುದು ಸರಿಯಲ್ಲ. ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಡ ಎಂದು ಬಿಜೆಪಿಯವರು ಹೇಳಿಕೆ ಕೊಡಲಿ.
ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಿಲ್ಲ. ಚುನಾವಣೆ ಇರುವುದು ಮುಂದಿನ ಮೇ ತಿಂಗಳಿನಲ್ಲಿ ನಾಳೆ ಅಥವಾ ನಾಳಿದ್ದು ಅಲ್ಲ. ಪ್ರತ್ಯೇಕ ಧ್ವಜ ಕುರಿತು ಸಂವಿಧಾನದಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಬಿಜೆಪಿ ನಾಯಕರು ಮಾತನಾಡಲಿ.
ರಾಜ್ಯ ಪ್ರತ್ಯೇಕ ಧ್ವಜ ಹೊಂದುವುದು ರಾಷ್ಟ್ರೀಯತೆ ಅಥವಾ ದೇಶದ ಏಕತೆಗೆ ವಿರುದ್ಧ ಅಲ್ಲ. ಇದರಿಂದ ರಾಷ್ಟ್ರಧ್ವಜದ ಮೇಲಿನ ಗೌರವ ಕಡಿಮೆ ಆಗುವುದಿಲ್ಲ. ಗೌರವ ಕೊಟ್ಟೇ ಕೊಡುತ್ತೇವೆ.
ರಾಷ್ಟ್ರಧ್ವಜ ಯಾವಾಗಲೂ ಎತ್ತರದಲ್ಲಿ ಹಾರಾಡಬೇಕು. ಅದನ್ನು ಮೀರಿಸಿ ಮತ್ತೊಂದು ಧ್ವಜವನ್ನು ಹಾರಿಸುವ ಪ್ರಶ್ನೆಯೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತ್ಯೇಕ ಧ್ವಜ ಹೊಂದುವುದಕ್ಕೆ ಸಂವಿಧಾನದಲ್ಲಿ ಯಾವುದೇ ನಿರ್ಬಂಧ ಇಲ್ಲ.
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕೇ? ನಿಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕೇ? #karnatakaflag #Kannada #MystateMyflag #onenationoneflag #Karnataka @INCKarnataka @BJP4Karnataka
— PublicTV (@publictvnews) July 18, 2017