ಬಂಜೆ ಅಂತ ಸೊಸೆಗೆ ಬೆಂಕಿ ಹಚ್ಚಿದವರಿಗೆ ಜೀವಾವಧಿ ಶಿಕ್ಷೆ

Public TV
1 Min Read
chamarajnagar court

ಚಾಮರಾಜನಗರ: ಬಂಜೆ ಎಂದು ಸೊಸೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗಳಿಗೆ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಚಾಮರಾಜನಗರ ಜಿಲ್ಲಾ ಸೆಷನ್ಸ್ ಕೋರ್ಟ್ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ, ರಮೇಶ, ದೊಡ್ಡಮ್ಮ ಶಿಕ್ಷೆಗೊಳಗಾದವರು. 2007 ರಲ್ಲಿ ಕನ್ನಹಳ್ಳಿಮೋಳೆ ಗ್ರಾಮದ ಮಂಜುಳಾರನ್ನು ಬೆಂಡರವಾಡಿ ಗ್ರಾಮದ ಚಿಕ್ಕಮಾದಶೆಟ್ಟಿಯ ಮಗ ಮಹೇಶ್ ಎಂಬುವನೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ 7 ವರ್ಷಗಳಾದ್ರು ಮಕ್ಕಳಾಗದಿದ್ದರಿಂದ 2013 ನ.21 ರಂದು ಮಂಜುಳಾಗೆ ಅತ್ತೆ ಬೆಳ್ಳಮ್ಮ, ಮೈದುನ ರಮೇಶ್, ವಾರಗಿತ್ತಿ ದೊಡ್ಡಮ್ಮ ಎನ್ನುವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಂಜುಳಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

CNG COURT

ಪೊಲೀಸರು, ತಾಲೂಕು ಅಧಿಕಾರಳಿಗೆ ಮಂಜುಳ ಅವರು ಸಾವನ್ನಪ್ಪುವ ಮುನ್ನ ನೀಡಿದ್ದ ಮರಣಪೂರ್ವ ಹೇಳಿಕೆಯಲ್ಲಿ ಅತ್ತೆ ಬೆಳ್ಳಮ್ಮ, ಮಾವ ಚಿಕ್ಕಮಾದಶೆಟ್ಟಿ, ಮೈದುನನಾದ ರಮೇಶ್ , ರಂಗಸ್ವಾಮಿ ಹಾಗೂ ವಾರಗಿತ್ತಿ ದೊಡ್ಡಮ್ಮರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಹೇಳಿದ್ದರು. ಬೆಳ್ಳಮ್ಮ, ರಮೇಶ್  ಹಾಗೂ ದೊಡ್ಡಮ್ಮರ ಮೇಲಿನ ಆರೋಪ ಸಾಬೀತಾಗಿದ್ದರಿಂದ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾ. ಡಿ.ವಿನಯ್ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಪೂರಕ ಸಾಕ್ಷಿಗಳಿಲ್ಲದಿದ್ದರಿಂದ ಮಾವ ಚಿಕ್ಕಮಾದಶೆಟ್ಟಿ, ಮೈದುನ ರಂಗಸ್ವಾಮಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದ್ದು, ಸರ್ಕಾರಿ ಅಭಿಯೋಜಕರಾಗಿ ಎಂ.ಎಸ್. ಉಷಾ ವಾದ ಮಂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *