ಬೆಂಗಳೂರು: ಕುಡಿದ ಮತ್ತಿನಲ್ಲಿ ತಲೆಕೂದಲು ಕತ್ತರಿಸಿ ಬಟ್ಟೆ ಬಿಚ್ಚಿಸಿ ಹಿರಿಯ ವಿದ್ಯಾರ್ಥಿಗಳು ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ರ‍್ಯಾಗಿಂಗ್ ಮಾಡಿದ ಪ್ರಕರಣವೊಂದು ಬೆಂಗಳೂರಿನಲ್ಲಿ ಡಿಸೆಂಬರ್ 24ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಿರಣ್ ಶರ್ಮ, ಇಂದ್ರಜಿತ್, ರಾಹುಲ್ ಜಾ, ಶುಭವ್ ಹಾಗು ಗೌತಮ್ ಈ ಕೃತ್ಯವನ್ನು ಎಸಗಿದ್ದಾರೆ. ನಾಲ್ವರು ಉತ್ತರ ಭಾರತ ಮೂಲದವರಾಗಿದ್ದು, ಬೆಂಗಳೂರು ರಾಜಾಜಿನಗರದ ಇಎಸ್‍ಐ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗೆ ಥಳಿಸಿ ಟೆರೆಸ್ ಮೇಲೆ ಕರದುಕೊಂಡು ಹೋಗಿ ತಲೆಕೂದಲು ಕತ್ತರಿಸಿ ಬಳಿಕ ಎಲ್ಲರ ಮುಂದೆ ಬಟ್ಟೆ ಬಿಚ್ಚಿಸಿ ರ‍್ಯಾಗಿಂಗ್ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ರಾಜಾಜಿನಗರದಲ್ಲಿರುವ ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿರುವ ಇಎಸ್‍ಐಸಿಎಂಸಿ ಹಾಗೂ ಪಿಜಿಐಎಂಎಸ್‍ಆರ್ ಮೆಡಿಕಲ್ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದೇನೆ. ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿರುವ ಇಎಸ್‍ಐಸಿ ಬಾಯ್ಸ್ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದೇನೆ. ಅದೇ ಹಾಸ್ಟೆಲ್‍ನಲ್ಲಿರುವ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಾದ ಕಿರಣ್ ಶರ್ಮಾ, ಇಂದ್ರಜಿತ್, ರಾಹುಲ್ ಜಹ, ಶಭವ್, ಗೌತಮ್ ಹಾಗೂ ಇತರೇ ಮೂರು ಜನ ರೂಮ್‍ಮೇಟ್ಸ್ ಸೇರಿಕೊಂಡು ರ‍್ಯಾಗಿಂಗ್ ಮಾಡಿದ್ದಾರೆ.
ಡಿ. 24ರಂದು ರಾತ್ರಿ ಸುಮಾರು 10 ಗಂಟೆಗೆ ಕುಡಿದ ಮತ್ತಿನಲ್ಲಿ ಬಂದು ನಿದ್ದೆ ಮಾಡುತ್ತಿದ್ದ ನನಗೆ ಕಪಾಳಕ್ಕೆ ಹೊಡೆದು, ಬೆಡ್‍ನಿಂದ ಕೆಳೆಗೆ ಎಸೆದಿದ್ದಾರೆ. ಬಳಿಕ ನನಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ರ‍್ಯಾಗಿಂಗ್ ಮಾಡಿದರು. ಈ ವೇಳೆ ಅವರು ನನ್ನ ತಂದೆ, ತಾಯಿ, ತಂಗಿಗೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿ ನೀನು ಕೀಳು ಜಾತಿಯವನು, ನೀನು ಎಂಬಿಬಿಎಸ್ ವ್ಯಾಸಂಗ ಮಾಡಲು ಯೋಗ್ಯತೆ ಇಲ್ಲದ ಜಾತಿಯವರನು ಎಂದು ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ.
ನನ್ನ ತಲೆ ಹಿಂಭಾಗದ ಕೂದಲನ್ನು ಕಟ್ ಮಾಡಿ ಅವಮಾನಿಸಿ ಎಲ್ಲಾ ಬಟ್ಟೆಗಳನ್ನು ತೆಗೆದು ನಮ್ಮ ಮುಂದೆ ನಿಲ್ಲು ಎಂದು ರ‍್ಯಾಗಿಂಗ್ ಮಾಡಿದ್ದಾರೆ. ಅಲ್ಲದೇ ಡಿ. 25ರಂದು ಮಧ್ಯಾಹ್ನ 12 ಗಂಟೆಗೆ ನನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳನ್ನು ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ವಿದ್ಯಾರ್ಥಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿಯ ದೂರು ದಾಖಲಿಸಿಕೊಂಡ ರಾಜಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಿಕ್ಷಣ ಕಾಯ್ದೆ, ಜಾತಿನಿಂಧನೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv