ಬೆಂಗಳೂರು: ಹಿರಿಯ ಪತ್ರಕರ್ತ ಸಂಜೆವಾಣಿ ಶಿವಣ್ಣ(Shivanna) ಎಂದೇ ಖ್ಯಾತರಾಗಿದ್ದ ಅ. ಚ. ಶಿವಣ್ಣ (84) ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಪತ್ನಿ ಇಂದಿರಾ ಶಿವಣ್ಣ ಪುತ್ರ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೀಪಕ್ ಶಿವಣ್ಣ ಅವರನ್ನು ಶಿವಣ್ಣ ಅಗಲಿದ್ದಾರೆ. ಪತ್ರಿಕೋದ್ಯಮ (Journalism) ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ಶಿವಣ್ಣ ಅವರು ಮನೆಯಲ್ಲೇ ಮಧ್ಯಾಹ್ನ ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರ ಸಮೀಪದ ಅರಳು ಮಲ್ಲಿಗೆಯಲ್ಲಿ ಜನಿಸಿದ ಇವರು 1974 ರಲ್ಲಿ ಪತ್ರಿಕಾರಂಗ ಪ್ರವೇಶಿಸಿದ್ದರು. ಲೋಕವಾಣಿಯಲ್ಲಿ ವರದಿಗಾರರಾಗಿ ಚಲನಚಿತ್ರ ವಿಮರ್ಶಕರಾಗಿ ನಂತರ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿ ಅಲ್ಲಿಂದ ಸಂಜೆವಾಣಿಯಲ್ಲಿ 26 ವರ್ಷಗಳ ಕಾಲ ಮುಖ್ಯವರದಿಗಾರರಾಗಿ ಅವರು ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್, ಬೆಂಗಳೂರು ವರದಿಗಾರರ ಕೂಟಗಳಿಗೆ ಹೊಸ ರೂಪ ನೀಡುವಲ್ಲಿಯೂ ಅವರ ಪಾತ್ರ ಸ್ಮರಣೀಯ. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಯಾಗಿಗೂ ಆಯ್ಕೆಯಾಗಿದ್ದರು.
ಶಿವಣ್ಣ ಅವರ ಸೇವೆಯನ್ನು ಗುರುತಿಸಿದ ರಾಜ್ಯ ಸರ್ಕಾರ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರು ಮಹಾನಗರ ಪಾಲಿಕೆ ಕೊಡಮಾಡುವ ಕೆಂಪೇಗೌಡ ಪ್ರಶಸ್ತಿ (1999), ಕನ್ನಡ ಸಾಹಿತ್ಯ ಪರಿಷತ್ತಿನ ಕಿಡಿ ಶೇಷಪ್ಪ ಪ್ರಶಸ್ತಿ (1999), 2004 ರಲ್ಲಿ ಡಾ. ವಿಶ್ವೇಶ್ವರಯ್ಯ ಪ್ರಶಸ್ತಿ, 2009 ರಲ್ಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಹಾಗೂ ಬೆಂಗಳೂರು ಕೆ. ಯು. ಡಬ್ಲ್ಯೂ ಜೆ ಪ್ರಶಸ್ತಿ, ಎಸ್. ವಿ. ಜಯಾಶೀಲ ರಾವ್ ಪ್ರಶಸ್ತಿ, ಅ. ನ. ಕೃ ಪ್ರಶಸ್ತಿಗಳು ಅವರಿಗೆ ಸಂದಿವೆ.

