ನವದೆಹಲಿ: ದೇಶದ ಗುಪ್ತಚರ ಸಂಸ್ಥೆ ‘ರಾ’ಗೆ (RAW) ನೂತನ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ರವಿ ಸಿನ್ಹಾ (Ravi Sinha) ಅವರನ್ನು ನೇಮಿಸಲಾಗಿದೆ.
ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (Research and Analysis Wing) ಪ್ರಸ್ತುತ ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ (Samant Goel) ಅವರ ಅಧಿಕಾರಾವಧಿ ಇದೇ ಜೂನ್ 30 ರಂದು ಕೊನೆಗೊಳ್ಳಲಿದೆ. ಬಳಿಕ ರವಿ ಸಿನ್ಹಾ 2 ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಿನ್ಹಾ ಅವರು ಛತ್ತೀಸ್ಗಢ ಕೇಡರ್ನ 1988ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಏಜೆನ್ಸಿಯ ಎರಡನೇ ಕಮಾಂಡ್ ಆಗಿದ್ದಾರೆ. ಇವರು ಕಳೆದ 7 ವರ್ಷಗಳಿಂದ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು. ರವಿ ಸಿನ್ಹಾ ತಮ್ಮ ಕಾರ್ಯತಂತ್ರ ಹಾಗೂ ಬೇಹುಗಾರಿಕಾ ಕೌಶಲ್ಯಗಳಿಗೆ ಹೆಸರಾಗಿದ್ದು, ಈಗ ರಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಪ್ರಸ್ತುತ ರಾ ಮುಖ್ಯಸ್ಥ, ಪಂಜಾಬ್ ಕೇಡರ್ನ 1984ರ ಬ್ಯಾಚ್ ಐಪಿಎಸ್ ಅಧಿಕಾರಿ ಸಮಂತ್ ಗೋಯೆಲ್ ತಮ್ಮ ಅಧಿಕಾರಾವಧಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲಿ ಸಂಸ್ಥೆಗೆ ಸೇರಿದ ಇವರು 2019ರಲ್ಲಿ ಸಂಸ್ಥೆಯ ಮುಖ್ಯಸ್ಥರಾದರು. ಇವರ ಅಧಿಕಾರಾವಧಿಯನ್ನು 2 ಬಾರಿ ವಿಸ್ತರಿಸಿದ್ದು, 4 ವರ್ಷಗಳ ಕಾಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ಏರ್ಬಸ್ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್ – ವಿಶ್ವದಾಖಲೆ ಬರೆದ ಇಂಡಿಗೋ
ಇವರ ಅಧಿಕಾರಾವಧಿಯಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು 2019ರಲ್ಲಿ ಪಾಕಿಸ್ತಾನದ ಬಾಲಕೋಟ್ನಲ್ಲಿ ಭಾರತ ಯಶಸ್ವಿಯಾಗಿ ವೈಮಾನಿಕ ದಾಳಿ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಶಾಂತಿಯುತವಾಗಿ ರದ್ದು ಮಾಡಲಾಗಿತ್ತು. ಮಾತ್ರವಲ್ಲದೇ ಪಾಕಿಸ್ತಾನಿ ಹಾಗೂ ಖಲಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು.
ರಾ ಭಾರತದ ಪ್ರಧಾನ ಗುಪ್ತಚರ ಸಂಸ್ಥೆಯಾಗಿದ್ದು, ಇದನ್ನು 1968ರಲ್ಲಿ ಸ್ಥಾಪಿಸಲಾಗಿದೆ. ಚೀನಾ ಹಾಗೂ ಪಾಕಿಸ್ತಾನದ ಚಟುವಟಿಕೆಗಳ ಮೇಲೆ ಕಣ್ಣಿಡಲು ರಾ ಅನ್ನು ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಭಾರತ ಸೂಪರ್ ಪವರ್ – ನನ್ನ ವಿಷಯ ಅದಲ್ಲವೆಂದ ರಘುರಾಮ್ ರಾಜನ್