Connect with us

Cinema

Exclusive: ಪಬ್ಲಿಕ್ ಟಿವಿ ಜೊತೆ ನಟಿ ಮಹಾಲಕ್ಷ್ಮಿ ಮಾತು

Published

on

-ಮಹಾಲಕ್ಷ್ಮಿ ಬಿಚ್ಚಿಟ್ಟ ಸತ್ಯ ಏನು?
-ಮಹಾಲಕ್ಷ್ಮಿ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತೆ?

ಬೆಂಗಳೂರು: 28 ವರ್ಷಗಳಿಂದ ಬಣ್ಣದ ಲೋಕದಿಂದ ದೂರವಾಗಿದ್ದ ಸ್ವಾಭಿಮಾನಿ ನಟಿ ಮಹಾಲಕ್ಷ್ಮಿ ಪಬ್ಲಿಕ್ ಟಿವಿ ಜೊತೆ ತಮ್ಮ ಸಿನಿ ಬದುಕು ಮತ್ತು ಖಾಸಗಿ ಜೀವನವನ್ನು ಹಂಚಿಕೊಂಡಿದ್ದಾರೆ. ಮಹಾಲಕ್ಷ್ಮಿ ಮತ್ತೊಮ್ಮೆ ಚಂದನವನಕ್ಕೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ತುಂಬೆಲ್ಲ ಹರಿದಾಡುತ್ತಿದೆ. ಪಬ್ಲಿಕ್ ಟಿವಿ ಚೆನ್ನೈನಲ್ಲಿರುವ ಮಹಾಲಕ್ಷ್ಮಿ ಅವರನ್ನು ಸಂಪರ್ಕಿಸಿತು.

ಪಬ್ಲಿಕ್ ಟಿವಿಯ ಪ್ರತಿನಿಧಿ ಜೊತೆ ಮಾತನಾಡಿರುವ ಮಹಾಲಕ್ಷ್ಮಿ ಅವರು ಸಿನಿಮಾದಿಂದ ಕಣ್ಮರೆಯಾಗಿದ್ದು ಏಕೆ? ಖಾಸಗಿ ಬದುಕು, ಕುಟುಂಬ, ಮಕ್ಕಳ ಬಗ್ಗೆ ಮಹಾಲಕ್ಷ್ಮಿ ಮಾತನಾಡಿದ್ದಾರೆ. ದಶಕಗಳ ಕಾಲ ಚಂದನವನದಲ್ಲಿ ಬಿರುಗಾಳಿ ಸೃಷ್ಠಿಸಿ, ತಮ್ಮ ಛಾಪು ಮೂಡಿಸಿದವರು ಮಹಾಲಕ್ಷ್ಮಿ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸ್ವಾಭಿಮಾನ ಸಿನಿಮಾದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಹಾಲಕ್ಷ್ಮಿ ಕೆಲವೇ ವರ್ಷಗಳಲ್ಲಿ ಯಶಸ್ಸಿನ ಶಿಖರವನ್ನೇರಿದರು.

ಯಾವುದೇ ಸ್ಟಾರ್ ಸಿನಿಮಾಗಳು ಇರಲಿ ಅಲ್ಲಿ ಮಹಾಲಕ್ಷ್ಮಿ ಇರಬೇಕಿತ್ತು. ನಿರ್ದೇಶಕರು ಮಹಾಲಕ್ಷ್ಮಿ ಅವರ ಸಿನಿಮಾ ಡೇಟ್ ಗಾಗಿ ಕಾಯುತ್ತಿದ್ದರು. ಡಾ.ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್‍ನಾಗ್ ಮತ್ತು ಅನಂತ್‍ನಾಗ್ ನಂತಹ ದಿಗ್ಗಜರೊಂದಿಗೆ ನಟಿಸಿ ಮಹಾಲಕ್ಷ್ಮಿ ಸೈ ಅನ್ನಿಸಿಕೊಂಡಿದ್ದರು. ಇಂತಹುವುದೇ ಪಾತ್ರ ಬೇಕೆಂದು ಮಹಾಲಕ್ಷ್ಮಿ ಎಂದು ಹಠ ಮಾಡಿರಲಿಲ್ಲ. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸೋದು ಮಹಾಲಕ್ಷ್ಮಿ ಅವರ ಕರ್ತವ್ಯವಾಗಿತ್ತು. ಹೀಗೆ ಚಂದನವನದಲ್ಲಿ ಎಂದೂ ಅಳಿಸಲಾಗದ ಹೆಜ್ಜೆಯನ್ನು ಮೂಡಿಸಿರುವ ಮಹಾಲಕ್ಷ್ಮಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

ಪ್ರಶ್ನೆ – ಇಷ್ಟು ವರ್ಷ ಎಲ್ಲಿದ್ರಿ? ಏನ್ಮಾಡ್ತಿದ್ರಿ?
ಮಹಾಲಕ್ಷ್ಮಿ – ಇಷ್ಟು ವರ್ಷ ನಾನು ಒಬ್ಬ ಪೂರ್ಣಪ್ರಮಾಣದ ಗೃಹಿಣಿಯಾಗಿದ್ದೆ.
ಪ್ರಶ್ನೆ – ದುರ್ಗಾಷ್ಟಮಿ ಸಿನಿಮಾ ಆದ್ಮೇಲೆ ನೀವು ಬ್ರೇಕ್ ತೊಗೊಂಡಿರುವುದು ಯಾಕೆ? ಏನು?
ಮಹಾಲಕ್ಷ್ಮಿ – ಪ್ರತಿಯೊಬ್ಬ ಹೆಣ್ಣಿಗೆ ಫ್ಯಾಮಿಲಿಗೆ ಸಮಯ ನೀಡಬೇಕೆನ್ನುವ ಆಸೆ ಇರುತ್ತೆ. ಅದರಂತೆಯೇ ನಾನು ಬ್ರೇಕ್ ತೆಗೆದುಕೊಂಡಿದ್ದೆ. ಅದೇ ಕಾರಣಕ್ಕೆ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದೆ.

ಪ್ರಶ್ನೆ – ನಾವು ನಿಮ್ಮನ್ನ ತೆರೆಯ ಮೇಲೆ ನೋಡಿ 30 ವರ್ಷ ಆಯ್ತು. ಈ ಗ್ಯಾಪ್ ಹೇಗಿತ್ತು?
ಮಹಾಲಕ್ಷ್ಮಿ – ಈ ಗ್ಯಾಪ್ ನಂಗೆ ತುಂಬಾ ಖುಷಿ ಕೊಟ್ಟಿದೆ. ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಅವಕಾಶ ಸಿಕ್ತು. ಹಾಗಾಗಿ ಚರ್ಚ್ ಗೆ ಹೋಗಿ ಸೇವೆ ಮಾಡುತ್ತಿದ್ದೆ. ಇದರ ಬಗ್ಗೆ ಕೆಲವರು ರೂಮರ್ ಗಳನ್ನು ಹಬ್ಬಿಸಿದ್ದಾರೆ. ನಾನು ಸನ್ಯಾಸಿನಿಯಾಗಿದ್ದೇನೆ ಅಂತ. ಅದೆಲ್ಲಾ ರೂಮರ್, ಯಾವುದೂ ಸತ್ಯವಲ್ಲ. ನನಗೆ ಒಳ್ಳೆಯ ಕುಟುಂಬ ಇದೆ. ದೇವರ ದಯೆಯಿಂದ ನನ್ನ ಜೀವನ ಚೆನ್ನಾಗಿ ನಡೆಯುತ್ತಿದೆ.
ಪ್ರಶ್ನೆ – ಇಷ್ಟು ದಿನ ಯಾವ ಊರಿನಲ್ಲಿದ್ರಿ?
ಮಹಾಲಕ್ಷ್ಮಿ – ಚೆನ್ನೈನಲ್ಲಿದ್ದೆ.

ಪ್ರಶ್ನೆ – ಮೇಡಂ ಯಾವತ್ತಾದ್ರೂ ಶೂಟಿಂಗ್ ಮತ್ತು ಮೇಕಪ್‍ನ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಫೀಲ್ ಮಾಡಿಕೊಂಡಿದ್ದೀರಾ?
ಮಹಾಲಕ್ಷ್ಮಿ – ನನ್ನ ಪಿಕ್ಚರ್ ಗಳನ್ನು ನೋಡುವಾಗ ಫೀಲಾಗುತ್ತೆ. ನಮ್ಮ ಪ್ರಾಮುಖ್ಯತೆ ಅನುಗುಣವಾಗಿ ನಾನು ಸಾಗಬೇಕಾಗುತ್ತದೆ. ನಾವು ಕೆಲಸ ಮಾಡುವುದು ಫ್ಯಾಮಿಲಿಗೊಸ್ಕರ ತಾನೇ? ನಾನು ಎಲ್ಲಾ ಲೆಜೆಂಡ್ಸ್ ಗಳ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳ ನಟನಾ ಜೀವನದಲ್ಲಿ ಉತ್ತಮ ಚಿತ್ರಗಳನ್ನು ಕೊಟ್ಟ ಖುಷಿ ನನಗಿದೆ. ಅಲ್ಲದೆ ನನ್ನ ಜೀವನದ ಮತ್ತೊಂದು ಭಾಗವನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕೆಂದು ಬ್ರೇಕ್ ತೆಗೆದುಕೊಂಡೆ.

ಪ್ರಶ್ನೆ– ಈಗ ಕಂಬ್ಯಾಕ್ ಪ್ಲಾನ್ ಏನು ಮ್ಯಾಮ್? ಏನೆಲ್ಲಾ ನಿರೀಕ್ಷೆಗಳಿವೆ? ನೀವು ಮತ್ತೆ ಚಿತ್ರರಂಗಕ್ಕೆ ಬರ್ತಿರಾ, ಸಿನಿಮಾ ಮಾಡ್ತೀರಾ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ನೋಡಿದ್ರೆ ಖುಷಿಯಾಗುತ್ತೆ. ನಾನು ಟಿ.ವಿಯಲ್ಲಿ ನಿಮ್ಮ ಸಿನಿಮಾಗಳನ್ನು ನೋಡಿದ್ವಿ. ಸಿನಿಮಾ ಥಿಯೇಟರ್ ನಲ್ಲಿ ನೋಡಿರಲಿಲ್ಲ. ಈ ಕಂಬ್ಯಾಕ್ ರೀಸನ್ ಏನು?
ಮಹಾಲಕ್ಷ್ಮಿ – ಈಗ ನನ್ನ ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿದ್ದಾರೆ. ಇನ್ನು ಕಂಪ್ಲೀಟಾಗಿ ಚಿತ್ರರಂಗವನ್ನು ಹಾಗೇ ಬಿಡೋದಕ್ಕೆ ನನಗೆ ಇಷ್ಟ ಇಲ್ಲ. ಈಗ ನನ್ನ ಬಳಿ ಸಮಯ ಇದೆ. ಹಾಗಾಗಿ ಆ ಒಂದು ಗ್ಯಾಪ್‍ನಲ್ಲಿ ಫುಲ್‍ಫಿಲ್ ಮಾಡುವುದಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿದ್ದೇನೆ.

ಪ್ರಶ್ನೆ– ಈಗ ಯಾವ ಸಿನಿಮಾ ಒಪ್ಪಿಕೊಂಡಿದ್ದೀರಾ? ಯಾವ ಚಿತ್ರವನ್ನು ಓಕೆ ಮಾಡಿದ್ದೀರಾ? ಏನಿದೆ? ಏನಾಗ್ತಿದೆ?
ಮಹಾಲಕ್ಷ್ಮಿ – ನಿನ್ನೆಯಿಂದ ನನಗೆ ಫೋನ್ ಬರ್ತಿದೆ.

ಪ್ರಶ್ನೆ– ತಮಿಳಿನಲ್ಲಿ ಒಂದು ಸಿನಿಮಾ ಮಾಡ್ತಿದ್ದೀರಾ ಅಂತ ಸುದ್ದಿ ಇದೆ?
ಮಹಾಲಕ್ಷ್ಮಿ – ಇಲ್ಲಿಯವರೆಗೂ ನಾನು ಯಾವುದೇ ತಮಿಳು ಸಿನಿಮಾಗಳನ್ನು ಮಾಡಿಲ್ಲ. ಮಾಡ್ತಾನೂ ಇಲ್ಲ. ಕನ್ನಡದಲ್ಲಿ ಒಂದು ಒಳ್ಳೆಯ ಕಥೆ ಮತ್ತು ಒಳ್ಳೆಯ ಸ್ಟೋರಿ ಇದ್ರೆ ಖಂಡಿತ ಆ ಸಿನಿಮಾವನ್ನು ಓಕೆ ಮಾಡುತ್ತೇನೆ.

ಪ್ರಶ್ನೆ– ನಿನ್ನೆಗೆ ಅಂಬರೀಶ್ ಅವರ ಒಂದು ವರ್ಷದ ಪುಣ್ಯ ತಿಥಿ ಮತ್ತು ಪುಣ್ಯ ಸ್ಮರಣೆಯಾಗಿದೆ. ಅವರು ತೀರಿಕೊಂಡಾಗ ನಿಮಗೆ ವಿಷಯ ಗೊತ್ತಾಗಿತ್ತಾ?
ಮಹಾಲಕ್ಷ್ಮಿ – ನನಗೆ ವಿಷಯ ತುಂಬಾ ತಡವಾಗಿ ಗೊತ್ತಾಯ್ತು. ನಾನು ಬೇರೆ ಯಾವುದೇ ಚಾನಲ್‍ಗಳನ್ನು ನೋಡುವುದಿಲ್ಲ. ಮೂರು ದಿನಗಳ ಬಳಿಕ ನನಗೆ ವಿಷಯ ಗೊತ್ತಾಯ್ತು. ನನಗೆ ತುಂಬಾ ಬೇಸರವಾಯ್ತು. ಸುಮಲತಾರಿಗೆ ಮತ್ತು ಅವರ ಫ್ಯಾಮಿಲಿಗೆ ಶಕ್ತಿ ಕೊಡಲಿ ಅಂತ ದೇವರಲ್ಲಿ ಬೇಡಿಕೊಂಡೆ. ನಾನು ದಿನ ಎಲ್ಲರಿಗೂ ಒಳ್ಳೆಯದಾಗ್ಲಿ ಅಂತ ಬೇಡಿಕೊಳ್ಳುತ್ತೇನೆ. ಇದಿಷ್ಟು ನಾನು ಚೆನ್ನೈನಿಂದ ಮಾಡಲಿಕ್ಕೆ ಸಾಧ್ಯವಾಗಿದ್ದು.

ಪ್ರಶ್ನೆ – ಮೇಡಂ ಇಷ್ಟು ದಿನ ನಿಮ್ಮನ್ನ ಇಂಡಸ್ಟ್ರಿಯಿಂದ ಯಾರಾದ್ರು ಸಂಪರ್ಕಿಸಲು ಪ್ರಯತ್ನ ಮಾಡಿದ್ರಾ? ಬನ್ನಿ ಸಿನಿಮಾ ಮಾಡಿ ಅಂತ ಯಾವುದಾದ್ರು ಚಿತ್ರತಂಡದ ಜೊತೆಗೆ ಮಾತುಕಥೆ ನಡೆದಿತ್ತಾ?
ಮಹಾಲಕ್ಷ್ಮಿ– ಯಾರೂ ಸಂಪರ್ಕಿಸಿಲ್ಲ. ಯಾಕಂದ್ರೆ ನಾನು ಇಡೀ ಇಂಡಸ್ಟ್ರಿಯನ್ನು ಬಿಟ್ಟಿದ್ದೆ. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆದ್ರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋ ನೋಡಿದೆ. ಮಹಾಲಕ್ಷ್ಮೀ ಎಲ್ಲಿ ಹೋದ್ರು? ಏನ್ಮಾಡ್ತಿದ್ದಾರೆ? ಮತ್ತೆ ಸಿನಿಮಾರಂಗಕ್ಕೆ ಬಂದ್ರೆ ಚೆನ್ನಾಗಿರುತ್ತಲ್ವಾ ಅಂತ ಕೆಲವರು ಚಿಕ್ಕ ವಯಸ್ಸಿನವರು ಆಸೆ ಪಡುತ್ತಿದ್ದರು. ಇದು ನನಗೆ ಅಚ್ಚರಿ ಅನ್ನಿಸಿತ್ತು. ಅಲ್ಲದೆ ಬನ್ನಿ ಚಿತ್ರರಂಗಕ್ಕೆ ಅಂತ ಕರೆಯುವುದನ್ನು ನೋಡಿದ್ಮೇಲೆ, ನಾನು ಯಾಕೆ ಸಿನಿಮಾ ಟ್ರೈ ಮಾಡಬಾರದು ಅಂತ ಅನ್ನಿಸಿತ್ತು.

ಪ್ರಶ್ನೆ – ಸಿನಿಮಾ ರಂಗ ಬೇಡ ಅಂತ ನೀವೇ ಇಂಡಸ್ಟ್ರಿಯವರಿಂದ ದೂರ ಹೋಗಿದ್ದು ಅಲ್ವಾ?
ಮಹಾಲಕ್ಷ್ಮಿ – ಇಂಡಸ್ಟ್ರಿ ಬೇಡ ಅಂತ ಅಲ್ಲ. ಫ್ಯಾಮಿಲಿ ಬೇಕು ಅಂತ. ಯಾವುದಾದ್ರೂ ಒಂದನ್ನು ಪಡೆದುಕೊಳ್ಳಬೇಕಂದ್ರೆ ಇನ್ನೊಂದನ್ನು ಬಿಡ್ಲೇಬೇಕಲ್ವಾ? ಇಲ್ಲ ಹಾಗಂತ ಯಾವುದನ್ನೂ ಬಿಡಬೇಕಿಲ್ಲ. ಇದು ಜೀವನದ ಭಾಗ ಅಷ್ಟೇ. ಬಾಲ್ಯದಲ್ಲಿ ಶಾಲೆಗೆ ನಂತ್ರ ಕಾಲೇಜ್‍ಗೆ ಆ ಬಳಿಕ ಮದುವೆ ಕೆಲಸ ಅಂತ ಇರ್ತೀವಿ. ಹಾಗೇ ಇದೆಲ್ಲಾ ಫೇಸ್ ಆಫ್ ಲೈಫ್ ಅಷ್ಟೇ.
ಪ್ರಶ್ನೆ – ಈಗ ಚಿತ್ರರಂಗಕ್ಕೆ ವಾಪಸ್ ಬರ್ತಿರೋದಕ್ಕೆ ನಿಮ್ಮನ್ನ ನೋಡಲು ಕಾಯುತ್ತಿರುವಂಥ ಜನರಿಗೆ ಏನ್ ಹೇಳೋದಕ್ಕೆ ಇಷ್ಟ ಪಡ್ತೀರಾ?
ಮಹಾಲಕ್ಷ್ಮಿ – ಇದು ಒಳ್ಳೆಯ ಪ್ರಶ್ನೆ. ನಾನು ಏನು ಹೇಳೋದಕ್ಕೆ ಇಷ್ಟ ಪಡ್ತೀನಿ ಅಂದ್ರೆ. ಕೆಲಸದ ಜೊತೆಗೆ ಕಮಿಟ್ ಆಗಿ. ನಿಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ. ಎಲ್ಲರಿಗೂ ಒಳ್ಳೆಯತನದಲ್ಲಿರಿ.

ಹೀಗೆ ಪಬ್ಲಿಕ್ ಟಿವಿ ಜೊತೆಯಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿರುವ ಮಹಾಲಕ್ಷ್ಮಿ ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕನ್ನಡ ಸಿನಿಮಾಗಳಿಂದ ಕೆಲವು ಆಫರ್ ಗಳು ಬರುತ್ತಿವೆ. ಆದಷ್ಟು ಬೇಗ ಕಮ್ ಬ್ಯಾಕ್ ಮಾಡಲಿದ್ದೇನೆ ಎಂಬ ಸುಳಿವನ್ನು ಮಹಾಲಕ್ಷ್ಮಿ ಬಿಟ್ಟುಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *