– ಸಿನಿ ಬದುಕಿನ ಬಗ್ಗೆ ಹಿರಿಯ ನಟ ರಾಜೇಶ್ ಮಾತು
ಮೈಸೂರು: ತಮಿಳುನಾಡಿನ ಮಾಜಿ ಸಿಎಂ ಡಿಎಂಕೆ ನಾಯಕ ಕರುಣಾನಿಧಿ ಅವರ ಬಗ್ಗೆ ಹಿರಿಯ ನಟ ರಾಜೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕಂಬನಿ ಮಿಡಿದಿದ್ದಾರೆ.
ಹಿರಿಯ ನಟ ರಾಜೇಶ್ ನೆನಪಿಸಿದ್ದು ಹೀಗೆ:
ನಾನು ಕರುಣಾನಿಧಿ ಅವರನ್ನು 70- 75 ವರ್ಷದಿಂದ ನೋಡಿದ್ದೇನೆ. ಅವರು 20ನೇ ಶತಮಾನದ 50ನೇ ದಶಕದಲ್ಲಿ ಅವರು ಚಿತ್ರ ಸಾಹಿತಿಯಾಗಿ ಬಹಳ ಪ್ರಖ್ಯಾತಿ ಪಡೆದಿದ್ದರು. ‘ಪರಾಶಕ್ತಿ’ ಚಿತ್ರದ ಮೂಲಕ ಶಿವಾಜಿ ಗಣೇಶನ್‍ರನ್ನು ಕರುಣಾನಿಧಿ ಅವರೇ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆಗ ನಿರ್ಮಾಪಕರು ಈತ ಬೇಡ ಎಂದು ಹೇಳಿದ್ದರು. ಆಗ ಕರುಣಾನಿಧಿ, ಇವರು ಬಹಳ ಶ್ರೇಷ್ಟ ನಟ ಎಂದು ಹೇಳಿದ್ದರು.
ಕರುಣಾನಿಧಿ ಮಾತನ್ನು ಕೇಳದ ನಿರ್ಮಾಪಕ ನನಗೆ ಈತ ಬೇಡ, ಈತನಿಗೆ ಪರ್ಸನಾಲಿಟಿ ಕೂಡ ಇಲ್ಲ, ಈತ ನನ್ನ ಚಿತ್ರದಲ್ಲಿ ನಟಿಸಿದ್ದರೆ ನನ್ನ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದರು. ಆಗ ಕರುಣಾನಿಧಿ ನಿನ್ನ ಚಿತ್ರ ಫ್ಲಾಪ್ ಆದರೆ ನಾನು ನಿನ್ನ ಚಿತ್ರದ ಹಣ ನೀಡುವೆ ಎಂದು ಚಾಲೆಂಜ್ ಹಾಕಿದ್ದರು. ಚಾಲೆಂಜ್ ಹಾಕಿದ ನಂತರ ಪರಾಶಕ್ತಿ ಸಿನಿಮಾ ಬಿಡುಗಡೆಯಾಗಿ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬಹಳ ಯಶಸ್ಸು ಕಂಡಿತ್ತು.
ತಮಿಳು ಭಾಷೆ, ತಮಿಳು ಸಾಹಿತ್ಯ ಹಾಗೂ ತಮಿಳು ಸಿನಿಮಾ ಡೈಲಾಗ್ ಬರೆಯುತ್ತಿದ್ದ ಕರುಣಾನಿಧಿ ಅವರಿಗೆ ಸಾಕಷ್ಟು ಯಶಸ್ಸು ದೊರೆಯಿತು. ಅವರ ಗುರು ಅಣ್ಣಾದೊರೈ ಇಬ್ಬರು ತಮಿಳು ಭಾಷೆಗಾಗಿ ಚಾರಿತ್ರಿಕವಾಗಿ ದುಡಿದ್ದು, ಯಶಸ್ಸನ್ನು ಸಂಪಾದನೆ ಮಾಡಿದ್ದರು. ಅಣ್ಣಾದೊರೈ ಹಾಗೂ ಕರುಣಾನಿಧಿ ಸಿನಿಮಾದಲ್ಲಿ ಬೆಳೆದರು. ನಂತರ ಕರುಣಾನಿಧಿ ರಾಜಕೀಯದತ್ತ ಮುಖ ಮಾಡಿದ್ದರು.
ಕರುಣಾನಿಧಿಗೆ ರಾಜಕೀಯದಲ್ಲಿ ಒಂದು ನೆಲೆ ಸಿಕ್ತು. ಹೀಗಾಗಿ ಅವರು ನೆಲ ಕಂಡುಕಂಡ ಮೇಲೆ ರಾಜಕೀಯದಲ್ಲಿ ಪ್ರಭುತ್ವವನ್ನು ಸಾಧಿಸುತ್ತಾ ಹೋದರು. ಬಳಿಕ ಜನರು ಡಿಎಂಕೆ ಪಕ್ಷವನ್ನು ಕಟ್ಟಿದ್ದರು. ಜನರು ಸಹಾಯ ಮಾಡಿ ಡಿಎಂಕೆ ಅಭ್ಯರ್ಥಿಗಳನ್ನು ಗೆಲ್ಲಿಸಿ, ಡಿಎಂಕೆ ಸ್ಥಾನಮಾನ ಕಂಡುಕೊಟ್ಟರು. ಬಳಿಕ ಅಣ್ಣಾದೊರೈ ಮುಖ್ಯಮಂತ್ರಿಯಾಗಿ ರಾಜ್ಯದ ಜನರಿಗೆ ಹಾಗೂ ಸಿನಿಮಾ ಚಿತ್ರರಂಗಕ್ಕೆ ಸಹಾಯ ಮಾಡುತ್ತಿದ್ದರು. ಹೀಗಿರುವಾಗ ಅಣ್ಣಾದೊರೈ ಗಂಟಲ ಬೇನೆಯಾಗಿ ಆಪರೇಶನ್ ಯಶಸ್ಸು ಕಾಣದೇ ಅಲೇ ನಿಧನರಾದರು. ಬಳಿಕ ಅಣ್ಣಾದೊರೈ ಮೃತದೇಹವನ್ನು ತಮಿಳುನಾಡಿಗೆ ಕರೆತಂದು ಅದ್ಭುತ ಗೌರವದಿಂದ ಅವರ ಅಂತ್ಯಕ್ರಿಯೆ ಮಾಡಿದ್ದರು. ಅಣ್ಣದೊರೈ ನಿಧನ ಹೊಂದಿನ ಬಳಿಕ ಸ್ಥಾನಕ್ಕೆ ಕರುಣಾನಿಧಿ ಬಂದರು. ಕರುಣಾನಿಧಿ ಡಿಎಂಕೆ ಕಟ್ಟಿ ಪ್ರಚಂಡ ಯಶಸ್ಸು ಕಂಡು ಮುಖ್ಯಮಂತ್ರಿಯಾದರು. ಕರುಣಾನಿಧಿ ಮುಖ್ಯಮಂತ್ರಿ ಆದ ಬಳಿಕವೂ ಒಳ್ಳೆಯ ಕೆಲಸ ಮಾಡಿದ್ದಾರೆ.