ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಬಿಜೆಪಿ ವಕ್ತಾರೆ ನೀಡಿದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ, ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಧಾರ್ಮಿಕ ಭಾವನೆಗಳ ಮೇಲಿನ ಗೌರವ ಮತ್ತು ಅದರ ಆಧಾರದ ಮೇಲೆ ಬೆದರಿಕೆಯೊಡ್ಡುತ್ತಿರುವುದರ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದ ಚತುರ್ವೇದಿ, ಯಾವುದೇ ಧರ್ಮವು ಕೆಲವೇ ಕೆಲವರ ಮಾತುಗಳಿಂದ ಅವರ ನಂಬಿಕೆ ಕೆಡಿಸುವಷ್ಟು ದುರ್ಬಲವಾಗಿರುವುದಿಲ್ಲ. ಹಾಗಾಗಿ ಅಲ್-ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಒಂದು ಬಗೆ, ಅದರ ಆಧಾರದ ಮೇಲೆಯೇ ಬೆದರಿಕೆಗಳನ್ನು ನೀಡುವುದು ಇನ್ನೊಂದು ಬಗೆ. ಆದರೆ ಕೆಲವರ ಮಾತುಗಳು ಧರ್ಮದ ಮೇಲಿನ ನಂಬಿಕೆಯನ್ನೇ ಕೆಡಿಸಬಹುದು ಎನ್ನುವಷ್ಟು ಯಾವುದೇ ಧರ್ಮವೂ ದುರ್ಬಲವಾಗಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್
ಭಯೋತ್ಪಾದಕ ಸಂಘಟನೆ ಅಲ್-ಖೈದಾ ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರವನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ನಮ್ಮ ಪ್ರವಾದಿಯ ಘನತೆಗಾಗಿ ಹೋರಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಅಲ್ ಖೈದಾ ಅಂಗಸಂಸ್ಥೆಯು ಕೇಸರಿ ಭಯೋತ್ಪಾದಕರು ಈಗ ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದೂ ಎಚ್ಚರಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾದಳ ಕಾರ್ಯೋನ್ಮುಖವಾಗಿವೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು
ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ವಿಶ್ವದಾದ್ಯಂತ ಅನೇಕ ಮುಸ್ಲಿಮರ ಹೃದಯಗಳು ರಕ್ತಸಿಕ್ತಗೊಂಡಿದ್ದು, ಪ್ರತಿಕಾರದ ಜ್ವಾಲೆಯಿಂದ ಉರಿಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನಮ್ಮ ಪ್ರವಾದಿಗೆ ಅವಮಾನಿಸಿರುವವರನ್ನು ನಾವು ಕೊಲ್ಲುತ್ತೇವೆ. ಅವರನ್ನು ಸ್ಫೋಟಿಸಲು ನಮ್ಮ ಮಕ್ಕಳ ದೇಹದೊಂದಿಗೆ ಸ್ಫೋಟಕಗಳನ್ನು ಬಂಧಿಸಿಡುತ್ತೇವೆ. ಇದರಲ್ಲಿ ಯಾವುದೇ ಕ್ಷಮಾದಾನವಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.