ಕೋಲ್ಕತ್ತಾ: ಜನರನ್ನು ಮನರಂಜಿಸೋಕೆ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜನರನ್ನು ಮನರಂಜಿಸಲು ಹೋಗಿ ಅಪಾಯವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದರು. ಸಹೋದ್ಯೋಗಿಯ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಜಲ್ಪೈಗುರಿ ಹಳ್ಳಿಗಾಡಿನ ಜನತೆ ಅರಣ್ಯ ಅಧಿಕಾರಿಗಳಿಗೆ ಕರೆಮಾಡಿ, ತಮ್ಮ ಮೇಕೆಗಳನ್ನು ರಾಕ್ ಪೈಥಾನ್ ಹೆಬ್ಬಾವು ತಿಂದು ಹಾಕುತ್ತಿದೆ ಎಂದು ದೂರು ನೀಡಿದ್ದರು. ಹೆಬ್ಬಾವನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಳ್ಳಿಗೆ ಧಾವಿಸಿ, 18 ಅಡಿ ಉದ್ದದ ಸುಮಾರು 40 ಕೆ.ಜಿ ತೂಕದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
Advertisement
ಈ ಸಂದರ್ಭದಲ್ಲಿ ಸೆಲ್ಫಿ ಕ್ರೇಜ್ ಇದ್ದ ಅರಣ್ಯಾಧಿಕಾರಿ ಹೆಬ್ಬಾವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಸೇರಿದ್ದ ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹೆಬ್ಬಾವು ಅಧಿಕಾರಿಯ ಕೊರಳಿಗೆ ಹಿಂದಿನಿಂದ ಬಿಗಿಯಾಗಿ ಸುತ್ತಿಕೊಳ್ಳಲಾರಂಭಿಸಿತ್ತು.
Advertisement
ಕೂಡಲೇ ಅರಣ್ಯಾಧಿಕಾರಿ “ಹಾವಿನ ಬಾಲವನ್ನು ಹಿಡಿ” ಎಂದು ಕಿರುಚುತ್ತಾ ಜನರಿಂದ ದೂರ ಓಡಿದರು. ಇದನ್ನು ನೋಡುತ್ತಲೇ ಸುತ್ತಲಿದ್ದ ಜನರೆಲ್ಲ ಅಲ್ಲಿಂದ ದೂರ ಓಡಿಹೋದರು. ಕೂಡಲೇ ಎಚ್ಚೆತ್ತ ಅವರ ಸಹಾಯಕ ಅಧಿಕಾರಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಾವನ್ನು ಅವರ ಕುತ್ತಿಗೆಯಿಂದ ಬಿಡಿಸಿದ್ದಾರೆ.
Advertisement
ಈ ಘಟನೆಯನ್ನು ನೋಡುತ್ತಿದ್ದ ಜನರ ಪ್ರಾಣವೇ ಬಾಯಿಗೆ ಬಂದಂತಾಗಿತ್ತು. ಕೆಲವರು ಅರಣ್ಯಾಧಿಕಾರಿಯ ಶೌರ್ಯದ ಕುರಿತು ಗುಣಗಾನ ಮಾಡಿದ್ರೆ, ಇನ್ನು ಕೆಲವರು ಅದನ್ನು ಟೀಕಿಸಿದರು. ಕೆಲ ಸಮಯದ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಡಲಾಯಿತು.