ಬೆಂಗಳೂರು: ಜಾಗ್ವಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿಖಿಲ್ ಕುಮಾರ್ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಕಡೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇದೇ ಜನವರಿ 25ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಸೀತಾರಾಮ ಕಲ್ಯಾಣ ಈಗಾಗಲೇ ಹಾಡು, ಟೀಸರ್ ಸೇರಿದಂತೆ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ಎ ಹರ್ಷ ಮತ್ತು ನಿಖಿಲ್ ಕಾಂಬಿನೇಷನ್ನಿನ ಈ ಚಿತ್ರ ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.
ಮೊದಲ ಚಿತ್ರ ಜಾಗ್ವಾರ್ ಮೂಲಕವೇ ನಿಖಿಲ್ ಕುಮಾರ್ ನಟನೆಯ ಬಗ್ಗೆ ತಮ್ಮ ಬದ್ಧತೆ ಎಂಥಾದ್ದೆಂಬುದನ್ನು ಸಾಬೀತು ಪಡಿಸಿದ್ದರು. ಡ್ಯಾನ್ಸ್, ಸಾಹಸ, ಅಭಿನಯ ಎಲ್ಲದರಲ್ಲಿಯೂ ತರಬೇತಿ ಪಡೆದೇ ಅವರು ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಜಾಗ್ವಾರ್ ಬಿಡುಗಡೆಯಾದ ದಿನವೇ ಮಾಧ್ಯಮದ ಮಂದಿ `ಸ್ಟಾರ್ ಈಸ್ ಬಾರ್ನ್’ ಅಂತಾ ಷರಾ ಬರೆದಿದ್ದವು. ಅದು ಸುಮ್ಮನೇ ದಕ್ಕುವಂಥದ್ದಲ್ಲ. ಒಬ್ಬ ನಟ ತೆರೆ ಮೇಲೆ ಎಲ್ಲ ರೀತಿಯಲ್ಲೂ ಆಕರ್ಷಿಸಿದರೆ ಮಾತ್ರ `ಸ್ಟಾರ್’ ಎನ್ನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾದಲ್ಲೇ ಸ್ಕೋರು ಮಾಡಿದ್ದ ನಿಖಿಲ್ ಎರಡನೇ ಸಿನಿಮಾದ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.
ನೃತ್ಯ ನಿರ್ದೇಶಕರಾಗಿ ಎಂಟ್ರಿ ಕೊಟ್ಟು ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಈ ವರೆಗೆ ಕೈಗೆತ್ತಿಕೊಂಡ ಸಿನಿಮಾಗಳನ್ನೆಲ್ಲಾ ಗೆಲ್ಲಿಸಿ ಇವತ್ತು ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಹರ್ಷ ನಿಖಿಲ್ ಕುಮಾರ್ ರನ್ನು ಮತ್ತಷ್ಟು ಹೊಸ ರೀತಿಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರಂತೆ. ಯುವರಾಜ ನಿಖಿಲ್ ಸಿನಿಮಾಗಾಗಿ ಜನ ಕಾತರದಿಂದ ಕಾದಿದ್ದಾರೆ. ಅದರ ಅಸಲಿ ಮಜಾ ಏನೆಂಬುದು ಜನವರಿ 25ರಂದು ತಿಳಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv