‘ಸೀಸ್ ಕಡ್ಡಿ’ಯ ಸೊಗಸಾದ ವೀಡಿಯೋ ಸಾಂಗ್ ಅನಾವರಣ!

Public TV
2 Min Read
Sees Kaddi Movie

ಬಿಡುಗಡೆಗೆ ಅಣಿಯಾಗಿರುವ `ಸೀಸ್ ಕಡ್ಡಿ’ (Sees Kaddi) ಚಿತ್ರದ ಅರ್ಥವತ್ತಾದ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ. ಈ ಮೂಲಕ ರತನ್ ಗಂಗಾಧರ್ (Rathan Gangadhar) ನಿರ್ದೇಶನದ ಈ ಚಿತ್ರ ಬಿಡುಗಡೆಯ ಅಂಚಿನಲ್ಲಿ ಒಂದಷ್ಟು ಚರ್ಚೆ ಹುಟ್ಟುಹಾಕಿದೆ.

ಹಾಡೆಂಬುದು ಹೆಚ್ಚಿನ ಸಂದರ್ಭದಲ್ಲಿ ರೋಮಾಂಚನ ಮೂಡಿಸುವ ಮನೋರಂಜನೆಯ ವಾಹಕವಾಗಿಯಷ್ಟೇ ಸಿನಿಮಾಗಳಲ್ಲಿ ಬಳಕೆಯಾಗೋದಿದೆ. ಆದರೆ, ವಿರಳ ಸಂದರ್ಭಗಳಲ್ಲಿ ಮಾತ್ರ ಒಟ್ಟಾರೆ ಕಥೆಯ ಆತ್ಮವನ್ನೇ ಬಚ್ಚಿಟ್ಟುಕೊಂಡಂಥ, ಕೇಳಿದಾಕ್ಷಣವೇ ಆಲೋಚನೆಗೆ ಹಚ್ಚುವಂಥಾ ಹಾಡುಗಳು ಸೃಷ್ಟಿಯಾಗೋದೂ ಇದೆ. ಇದೀಗ ಬಿಡುಗಡೆಗೊಂಡಿರುವ ಸೀಸ್ ಕಡ್ಡಿಯ ವೀಡಿಯೋ ಸಾಂಗ್ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರಿಕೊಳ್ಳುವಂತಿದೆ.

Sees Kaddi Movie 2

ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು ರೂಪುಗೊಂಡಿರುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿಗೆ ಸೇರ್ಪಡೆಗೊಳ್ಳುತ್ತದೆ. ಹೈಪರ್ ಲಿಂಕ್ ಆಂಥಾಲಜಿ ಶೈಲಿಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಸಿಕ್ಕಿದೆ. ಸೀಸ್ ಕಡ್ಡಿಯೀಗ ಈ ಸೊಗಸಾದ ವೀಡಿಯೋ ಸಾಂಗ್ ಮೂಲಕ ಮತ್ತೆ ಗಮನ ಸೆಳೆದಿದೆ. `ಬೇಧವು ಎಲ್ಲಿದೆ ಬೀಳುವ ಮಳೆಗೆ, ಕಾಗದ ಅಂಜಿದೆ ನಾಣ್ಯವು ಆಡಿದೆ’ ಅಂತ ಶುರವಾಗೋ ಈ ಹಾಡಿಗೆ ಮಹೇಂದ್ರ ಗೌಡ ಸಾಹಿತ್ಯ ಬರೆದಿದ್ದಾರೆ. ಕೆ.ಸಿ ಬಾಲ ಸಾರಂಗನ್ ಸಂಗೀತದ ಸದರಿ ಹಾಡನ್ನು ಬಾಲಸಾರಂಗನ್ ಮತ್ತು ಶುಭದಾ ಆರ್ ಪ್ರಕಾಶ್ ಹಾಡಿದ್ದಾರೆ.

ಹಾಡೊಂದು ಸಾಹಿತ್ಯದ ಮೂಲಕವೇ ಕೇಳುಗರನ್ನು ಕಾಡುವಂಥಾ ಅಪರೂಪದ ಸನ್ನಿವೇಶ ಇದರೊಂದಿಗೆ ಮತ್ತೆ ಸೃಷ್ಟಿಯಾಗಿದೆ. ಈ ಹಾಡಿನ ಸಾಲುಗಳನ್ನು ಕೇಳುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ‘ಯರ‍್ಯಾಕೆ ಬರಬೇಕು ನೀ ನಂಬು ನಿನ್ನನ್ನೆ, ಕೈಯೆತ್ತಿ ಮುಗಿಯೋದು ಕಾಲ್ತುಳಿದ ಕಲ್ಲನ್ನೆ’ ಎಂಬಂಥ ಸಮ್ಮೋಹಕ ಸಾಲುಗಳನ್ನು ಕೇಳಿದವರೆಲ್ಲ ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ.

Sees Kaddi Movie 1

ಈ ಹಾಡಿನ ಹಿನ್ನೆಲೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಒಂದೊಳ್ಳೆ ಕುಟುಂಬದಲ್ಲಿ ಹುಟ್ಟಿ, ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಲೋಕ ಸಂಚಾರ ಹೊರಟಾತ ಈ ಕಥೆಯ ಕೇಂದ್ರ ಬಿಂದು. ಅಂಥವನು ಆ ಹುಡುಕಾಟದ ಹಾದಿಯಲ್ಲಿ ಖಾಲಿ ಜಾಗದಲ್ಲಿರುವ ಒಂಟಿ ಮರ ನೋಡುತ್ತಾ ಧ್ಯಾನಸ್ಥನಾಗಿರುವಾಗಲೇ ಅರೆಹುಚ್ಚನೋರ್ವ ಬಳಿ ಬಂದು ಏನು ನೋಡುತ್ತಿದ್ದೀಯ ಎಂಬ ಪ್ರಶ್ನೆ ಕೇಳುತ್ತಾನೆ. ಆ ನಂತರ ನಡೆಯುವ ಸಂಭಾಷಣೆಯಲ್ಲಿ ಮತ್ತೊಂದು ಬಗೆಯ ಧ್ಯಾನೋದಯ ಆತನ ಪಾಲಿಗಾಗುತ್ತೆ. ಅದರ ಬಗ್ಗೆಯೇ ಆಲೋಚಿಸುತ್ತಾ ನಡೆಯುತ್ತಿರುವಾಗ ಘಟಿಸುವ ವಿದ್ಯಮಾನವೊಂದರ ಹಿನ್ನೆಲೆಯಲ್ಲಿ ಈ ಹಾಡು ಅರಳಿಕೊಂಡಿದೆ. ಅದು ಒಂದಿಡೀ ಸಿನಿಮಾದ ಆಂತರ್ಯವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂಬುದು ಚಿತ್ರತಂಡದ ಮಾತು.

Sees Kaddi Movie 3

ಅಂದಹಾಗೆ ಈ ಹಾಡಿನಲ್ಲಿ ಕಾಣಿಸಿಕೊಂಡಿರೋ ಪಾತ್ರದ ಹೆಸರು ಫರೀದ್. ಆತ ಹಿಂದೂನಾ ಅಥವಾ ಮುಸಲ್ಮಾನನಾ? ಆತ ಅದೇಕೆ ಆ ಹೆಸರನ್ನಿಟ್ಟುಕೊಳ್ಳುತ್ತಾನೆ? ಇಂಥಾ ತರ್ಕಗಳು ಸಿನಿಮಾದೊಳಗಿವೆಯಂತೆ. ವಿಶೇಷವೆಂದರೆ, ಈ ಪಾತ್ರವನ್ನು ಈ ಬಾರಿಯ ರಾಜರಾಣಿ ರಿಯಾಲಿಟಿ ಶೋ ಗೆದ್ದುಕೊಂಡಿರುವ ಸಂಜಯ್ ಕುಮಾರ್ ಗೌಡ ನಿರ್ವಹಿಸಿದ್ದಾರೆ. ಇದೇ ಮೇ ತಿಂಗಳ ಕಡೇಯ ಭಾಗದಲ್ಲಿ ‘ಸೀಸ್ ಕಡ್ಡಿ’ ಚಿತ್ರ ತೆರೆಗಾಣಲಿದೆ.

Share This Article