ತಮಿಳು ಚಿತ್ರೋದ್ಯಮಕ್ಕಿರುವುದು ಒಬ್ಬರೇ ಸೂಪರ್ ಸ್ಟಾರ್ (Superstar). ಅದು ರಜನಿಕಾಂತ್ (Rajinikanth) ಎನ್ನುವುದು ನಿರ್ವಿವಾದ. ತಮಿಳು ಪ್ರೇಕ್ಷಕರು ಕೂಡ ರಜನಿಯನ್ನು ಸೂಪರ್ ಸ್ಟಾರ್ ಎಂದೇ ಬಾಯ್ತುಂಬಾ ಕರೆಯುತ್ತಾರೆ. ಆದರೆ, ನಾಮ್ ತಮಿಳರ್ ಪಕ್ಷದ ಸಂಚಾಲಕ ಸೀಮನ್ (Seaman), ಆಡಬಾರದು ಮಾತುಗಳನ್ನು ಆಡಿ ವಿವಾದಕ್ಕೀಡಾಗಿದ್ದಾರೆ. ಜೊತೆಗೆ ಇಬ್ಬರು ಕಲಾವಿದರ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೂ ಕಾರಣವಾಗಿದ್ದಾರೆ.
ತಮಿಳಿನ ಪತ್ರಕರ್ತರೊಬ್ಬರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ‘ಮಾಜಿ ಸೂಪರ್ ಸ್ಟಾರ್’ ಎಂದು ಕರೆದಿದ್ದರು. ಹಾಗಾಗಿ ರಜನಿ ಅಭಿಮಾನಿಗಳು ಪತ್ರಕರ್ತನನ್ನು ಸುತ್ತುವರೆದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಅಭಿಮಾನಿಗಳ ಈ ನಡೆಯನ್ನು ಸೀಮನ್ ಖಂಡಿಸುವುದರ ಜೊತೆಗೆ ಮತ್ತೊಂದು ಹೊಸ ವಿವಾದ (Controversy) ಹುಟ್ಟು ಹಾಕಿದ್ದಾರೆ. ‘ಸದ್ಯ ತಮಿಳು ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಅಂತ ಇರುವುದು ವಿಜಯ್ (Vijay) ಮಾತ್ರ. ಅವರೇ ಹಾಲಿ ಸೂಪರ್ ಸ್ಟಾರ್. ರಜನಿಕಾಂತ್ ಏನೇ ಇದ್ದರೂ ಮಾಜಿ’ ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪು ಸುರಿದಿದ್ದಾರೆ. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್
ಪತ್ರಕರ್ತನು ಆಡಿದ ಮಾತಿಗಿಂತಲೂ ಸೀಮನ್ ಹೇಳಿಕೆ ತಮಿಳು ಸಿನಿಮಾ ರಂಗದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ವಿಜಯ್ ಮತ್ತು ರಜನಿಕಾಂತ್ ಅಭಿಮಾನಿಗಳು ಕಿತ್ತಾಡಿಕೊಳ್ಳುವಂತೆ ಮಾಡಿದೆ. ಸೀಮನ್ ಮನೆ ಮುಂದೆಯೂ ಹಲವಾರು ಅಭಿಮಾನಿಗಳು ಜಮೆಯಾಗಿ ಹೋರಾಟ ಕೂಡ ನಡೆಸಿದ್ದಾರೆ. ಸೀಮನ್ ಆಡಿದ ಮಾತು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ರಾಜಕೀಯ ವಲಯದಲ್ಲೂ ಚರ್ಚೆ ಮಾಡುವಂತಾಗಿದೆ. ಸೀಮನ್ ಆ ರೀತಿ ಮಾತನಾಡಿದ್ದು ಮತ್ತು ಅಭಿಮಾನಿಗಳ ಮಧ್ಯೆ ದ್ವೇಷ ಹುಟ್ಟಿಸಿದ್ದು ಸರಿಯಾದದ್ದು ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ವಿಜಯ್ ಮತ್ತು ರಜನಿಕಾಂತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದರೂ, ಅದು ವಿವಾದದ ರೂಪ ಪಡೆದುಕೊಂಡಿದ್ದರೂ, ಆ ಇಬ್ಬರೂ ನಟರು ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಭಿಮಾನಿಗಳನ್ನು ಸಮಾಧಾನಿಸುವಂತಹ ಗೋಜಿಗೂ ಹೋಗಿಲ್ಲ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.