ಲಕ್ನೋ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ನನ್ನು ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ಮಂಗಳವಾರ ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಸೀಮಾ ಹೈದರ್, ಆಕೆಯ ಪ್ರಿಯಕರ ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್‌ನನ್ನು ಗ್ರೇಟರ್ ನೋಯ್ಡಾದ ಸೆಕ್ಟರ್ 58 ಪ್ರದೇಶದಲ್ಲಿ ಉತ್ತರ ಪ್ರದೇಶದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ (ISI) ಆಕೆಗೆ ಸಂಬಂಧದ ಶಂಕೆಯ ಹಿನ್ನೆಲೆ ಎಟಿಎಸ್ ಹಾಗೂ ಇಂಟೆಲಿಜೆನ್ಸ್ ಬ್ಯೂರೋ (IB) ವಿಚಾರಣೆಗೆ ಒಳಪಡಿಸಿದೆ. ಮಾತ್ರವಲ್ಲದೇ ಸೀಮಾ ಹೈದರ್‌ನ ಈ ಹಿಂದೆ ಡಿಲೀಟ್ ಆಗಿರುವ ಮೊಬೈಲ್ ಡೇಟಾವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ವರದಿಗಳ ಪ್ರಕಾರ ಸೀಮಾ ಚಿಕ್ಕಪ್ಪ ಹಾಗೂ ಸಹೋದರ ಪಾಕಿಸ್ತಾನದ ಸೇನೆಯೊಂದಿಗೆ ಸಂಬಂಧ ಹೊಂದಿರುವುದರಿಂದ ಆಕೆಯ ಮೊಬೈಲ್ ಡೇಟಾ ಹಾಗೂ ಸೂಕ್ಷ್ಮ ವಿಷಯಗಳ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ವೀಸಾ ಇಲ್ಲದೆ ಭಾರತಕ್ಕೆ ಆಕೆ ಪ್ರವೇಶ ಪಡೆದ ಬಗ್ಗೆ ತನಿಖೆ ನಡೆಯುತ್ತಿದೆ. ಆಕೆಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಹಾಗೂ ಆಕೆಯ ಮಕ್ಕಳಿಗೆ ಸಂಬಂಧಿಸಿದ ಇತರ ದಾಖಲೆಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
30 ವರ್ಷದ ಸೀಮಾಗೆ ಆನ್‌ಲೈನ್ ಗೇಮ್ ಪಬ್ಜಿ ಮೂಲಕ ಭಾರತದ ನಿವಾಸಿ ಸಚಿನ್ ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದ್ದು, ಆತನೊಂದಿಗೆ ಜೀವಿಸುವ ಸಲುವಾಗಿ ತನ್ನ 4 ಮಕ್ಕಳೊಂದಿಗೆ ಮೇ ತಿಂಗಳಿನಲ್ಲಿ ನೇಪಾಳದ ಮೂಲಕ ಬಸ್‌ನಲ್ಲಿ ಭಾರತ ಪ್ರವೇಶಿಸಿದ್ದಳು. ಕಳೆದ 2 ತಿಂಗಳಿನಿಂದ ಆಕೆ ತನ್ನ ಗೆಳೆಯ ಸಚಿನ್ ಜೊತೆಗೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು.
ಪಾಕಿಸ್ತಾನದ ಮಹಿಳೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದನ್ನು ತಿಳಿದ ಅಧಿಕಾರಿಗಳು ಜುಲೈ 4ರಂದು ಸೀಮಾಳನ್ನು ಹಾಗೂ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನನ್ನು ಬಂಧಿಸಿದ್ದರು. ಆದರೂ ಜುಲೈ 7ರಂದು ಇಬ್ಬರಿಗೂ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತು. ಇದನ್ನೂ ಓದಿ: ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್
Web Stories