ಕಲಬುರಗಿ: ನಾನು ಮೂರು ಬಾರಿ ಸೋತಿದ್ದೇನೆ. ಹೀಗಾಗಿ ಈ ಬಾರಿಯಾದ್ರೂ ನನಗೆ ಆಶೀರ್ವಾದ ಮಾಡಿ ಅಂತಾ ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕಣ್ಣೀರು ಹಾಕಿದ್ದಾರೆ.
ಈ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾತೃಛಾಯ ಶಾಲಾ ಆವರಣದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡುವಾಗ, ನಾನು ಮೂರು ಬಾರಿ ಕಡಿಮೆ ಅಂತರ ಮತಗಳಿಂದ ಸೋತಿದ್ದೇನೆ. ಈ ಬಾರಿಯಾದರು ನನಗೆ ವಿಧಾನಸಭೆಗೆ ಕಳುಹಿಸಿಕೊಡಿ ಅಂತಾ ರಾಜ್‍ನಾಥ್ ಸಿಂಗ್ ಎದುರೇ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಭಾವುಕರಾಗಿ, ನನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ.
ಇನ್ನು ಇದೇ ವೇಳೆ ಸಮಾವೇಶದ ನಂತರ, ಖ್ಯಾತ ಕನ್ನಡ ಚಿತ್ರ ನಟಿ ಶೃತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು, ಕಾರ್ಯಕರ್ತರಲ್ಲದೆ ಕೆಲ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಹ ಮುಗಿಬಿದ್ದಿದ್ದರು. ಅಭಿಮಾನಿಗಳ ಆಸೆಗೆ ಬೇಸರಗೊಳ್ಳದೆ ತಾಳ್ಮೆಯಿಂದ ಸೆಲ್ಫಿ ತೆಗೆದುಕೊಂಡು ಕೆಲ ಕಾಲ ಅವರೊಂದಿಗೆ ಶೃತಿ ಬೆರೆತರು.