ಶಿವಸೇನೆಯಿಂದ ತಾಜ್‍ಮಹಲ್‍ನಲ್ಲಿ ಪೂಜೆ-ಭದ್ರತೆ ಹೆಚ್ಚಿಸಿದ ಜಿಲ್ಲಾಡಳಿತ

Public TV
2 Min Read
taj mahal

ಆಗ್ರಾ: ಶಿವಸೇನೆಯಿಂದ ತಾಜ್ ಮಹಲ್‍ನಲ್ಲಿ ಪೂಜೆ ನಡೆಸಲಾಗುವುದು ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭದ್ರತೆಯನ್ನು ಹೆಚ್ಚಿಸಿದೆ. ಪವಿತ್ರ ‘ಶ್ರಾವಣ’ ತಿಂಗಳ ಪ್ರತಿ ಸೋಮವಾರ ತಾಜ್ ಮಹಲ್‍ನಲ್ಲಿ ಆರತಿ ಮಾಡುವುದಾಗಿ ಶಿವಸೇನೆ ಬೆದರಿಕೆ ಹಾಕಿತ್ತು. ಈ ಹಿನ್ನೆಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ(ಎಎಸ್‍ಐ)ಯ ಮನವಿ ಮೇರೆಗೆ ತಾಜ್‍ಮಹಲ್ ಹೊರಗಡೆ ಭದ್ರತೆ ಹೆಚ್ಚಿಸಲು ಆಗ್ರಾ ಜಿಲ್ಲಾಡಳಿತ ಒಪ್ಪಿಕೊಂಡಿದೆ.

ಎಎಸ್‍ಐ ಅಧಿಕಾರಿಗಳು ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಪ್ರಾಚೀನ ಸ್ಮಾರಕ, ಪುರಾತತ್ವ ತಾಣ ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆ ಮತ್ತು ಸಂರಕ್ಷಿತ ಸ್ಮಾರಕಗಳಲ್ಲಿ ಹೊಸ ಸಂಪ್ರದಾಯ ಪ್ರಾರಂಭಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

shivsena

ನಮ್ಮ ಕಾರ್ಯಕರ್ತರು ತಾಜ್‍ಮಹಲ್‍ನಲ್ಲಿ ಆರತಿ ಮಾಡುತ್ತಾರೆ. ಪೊಲೀಸರು ಇದನ್ನು ತಡೆಯಲಿ ಎಂದು ಜು.17ರಂದು ಶಿವಸೇನೆ ಅಧ್ಯಕ್ಷ ಮೀನು ಲವಾನಿಯಾ ಆಗ್ರಾದ ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು.

ತಾಜ್‍ಮಹಲ್ ಮುಸ್ಲಿಂ ಅವರದ್ದಲ್ಲ, ಅದು ತಾಜ್ ಮಹಲ್ ಅಲ್ಲವೇ ಅಲ್ಲ. ಅದು ತೇಜೋ ಮಹಾಲಯ. ಇದು ಭಗವಾನ್ ಶಿವನ ದೇವಸ್ಥಾನ. ಹೀಗಾಗಿ ತೇಜೋ ಮಹಾಲಯದಲ್ಲಿ ಪವಿತ್ರ ಶ್ರಾವಣ ತಿಂಗಳ ಪ್ರತಿ ಸೋಮವಾರ ನಾವು ಆರತಿಯನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದರು.

TAJ MAHAL 3

ಆಗ್ರಾದ ಪುರಾತತ್ವಶಾಸ್ತ್ರಜ್ಞ ಎಎಸ್‍ಐ ಅಧೀಕ್ಷಕ ವಸಂತ್ ಸ್ವಾರಣಕರ್ ಈ ಕುರಿತು ಪ್ರತಿಕ್ರಿಯಿಸಿ, ತಾಜ್ ಮಹಲ್‍ನಲ್ಲಿ ಯಾವುದೇ ರೀತಿಯ ಆರತಿ ಹಾಗೂ ಪೂಜೆಯನ್ನು ಮಾಡಕೂಡದು. ಆಗ್ರಾ ಪೊಲೀಸರು ತಾಜ್ ಮಹಲ್ ಹೊರಗಡೆ ಹಾಗೂ ಸುತ್ತ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಅಡಿಶನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕೆ.ಪಿ.ಸಿಂಗ್ ಅವರು ಈ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಲಾ ಆಂಡ್ ಆರ್ಡರ್ ಹದಗೆಡಲು ಯಾರೊಬ್ಬರು ಅವಕಾಶ ನೀಡಬಾರದು. ಎಎಸ್‍ಐ ಮನವಿ ಮಾಡಿದಂತೆ ಪರ್ಯಾಯ ಭದತಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

taj mahal 4

ತಾಜ್ ಮಹಲ್ ವಿವಾದ ಇದೇ ಮೊದಲಲ್ಲ ಈ ಹಿಂದೆಯೂ ಸಹ ತಾಜ್‍ಮಹಲ್‍ನಲ್ಲಿ ಪೂಜೆ ಮಾಡುವ ಕುರಿತು ವಿವಾದ ಸೃಷ್ಟಿಯಾಗಿತ್ತು. ತಾಜ್ ಮಹಲ್ ಮೂಲತಃ ಶಿವನ ದೇವಾಲಯ ಎಂದು ನಿರೂಪಿಸಲು ಬಲಪಂಥೀಯ ಸಂಘಟನೆಗಳ ಮಹಿಳೆಯರು ತಾಜ್‍ಮಹಲ್‍ನ ಮಸೀದಿಯೊಳಗೆ ಪೂಜೆ ಮಾಡಿದ್ದರು.

shiv sena logo week

2008ರಲ್ಲಿ ಶಿವಸೇನೆ ಸಂಘಟನೆಯ ಗುಂಪೊಂದು ತಾಜ್‍ಮಹಲ್ ಒಳಗೆ ನುಗ್ಗಿ, ಕೈ ಮುಗಿದು ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದ್ದರು. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ಮಾಡಿದ್ದರು. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 17ನೇ ಶತಮಾನದಲ್ಲಿ ರಾಜ ಶಹಜಾನ್ ಶಿವನ ದೇವಾಲಯ ತೇಜೋ ಮಹಾಲಯವನ್ನು ಕೆಡವಿ ತಾಜ್ ಮಹಲ್ ಕಟ್ಟಿದ್ದಾನೆ ಎಂಬುದು ಶಿವಸೇನೆ ವಾದವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *