ಗದಗ: ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು 3 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 144 ಸೆಕ್ಷನ್ ಜಾರಿ ಹಿನ್ನಲೆ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಸಂಘಟನೆಗಳ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ. ಮದುವೆ, ಧಾರ್ಮಿಕ ಕಾರ್ಯ, ಶವ ಸಂಸ್ಕಾರ ಕಾರ್ಯಗಳನ್ನು ಹೊರತುಪಡಿಸಿ ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಓಡಾಡುವಂತಿಲ್ಲ. ಜೊತೆಗೆ ಮಾರಕಾಸ್ತ್ರಗಳನ್ನ ಕೊಂಡೊಯ್ಯುವುದು, ಯಾವುದೇ ಜೀವಂತ ವ್ಯಕ್ತಿಯ ಭಾವಚಿತ್ರ ಮೆರವಣಿಗೆ ಮತ್ತು ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾತು, ಹಾಡು, ಅಣಕ, ವಾದ್ಯ ಬಾರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ ಬಸ್ ಸಂಚಾರ, ವ್ಯಾಪಾರ-ವಹಿವಾಟು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಬುಧವಾರ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಮತ್ತು ಅರಣ್ಯ ಇಲಾಖೆ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೆಲ ಸಂಘಗಳು ಮುಂದಾಗಿದ್ದವು. ಆದರೆ ನಿಷೇಧಾಜ್ಞೆ ಜಾರಿ ಹಿನ್ನೆಲೆ ಆ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ, ಸಂಘಟನೆಗಳು ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ.