ಹೈದರಾಬಾದ್: ಇಲ್ಲಿನ (Hyderabad) ನಾಂಪಲ್ಲಿಯಲ್ಲಿ ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡನ್ನು ತರಲು ಹೋದ ವ್ಯಕ್ತಿಗೆ ಅಸ್ಥಿಪಂಜರವೊಂದು (Skeleton) ಕಾಣಿಸಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.
ನಾಂಪಲ್ಲಿ ಮಾರುಕಟ್ಟೆಯ ಬಳಿ ಇರುವ ಹಾಳು ಮನೆಗೆ ಏಳು ವರ್ಷಗಳಿಗೂ ಹೆಚ್ಚು ಕಾಲ ಬೀಗ ಹಾಕಲಾಗಿತ್ತು. ಈ ಮನೆಯ ಅಡುಗೆಮನೆಯಂತೆ ಕಾಣುವ ನೆಲದ ಮೇಲೆ ಅಸ್ಥಿಪಂಜರವೊಂದು ಬಿದ್ದಿತ್ತು. ಈ ಅವಶೇಷಗಳ ಸುತ್ತಲೂ ಹಲವಾರು ಪಾತ್ರೆಗಳು ಬಿದ್ದಿದ್ದವು. ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್
ನೈಋತ್ಯ ವಲಯದ ಉಪ ಪೊಲೀಸ್ ಆಯುಕ್ತ ಚಂದ್ರಮೋಹನ್ ಸೇರಿದಂತೆ ಹಬೀಬ್ ನಗರ ಪೊಲೀಸರ ತಂಡ ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಾಗಿಲು ಒಡೆದು, ಅವಶೇಷಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಮನೆಯ ಮಾಲೀಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಆಸ್ತಿ ಏಳು ವರ್ಷಗಳಿಗೂ ಹೆಚ್ಚು ಕಾಲ ಖಾಲಿಯಾಗಿ ಉಳಿದುಕೊಂಡಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಎಸಿಪಿ ಕಿಶನ್ ಕುಮಾರ್ ಮಾತನಾಡಿ, ಈ ಮನೆ ಮುನೀರ್ ಖಾನ್ ಎಂಬುವವರಿಗೆ ಸೇರಿದ್ದು, ಅವರಿಗೆ 10 ಮಕ್ಕಳಿದ್ದರು. ಅವರ ನಾಲ್ಕನೇ ಮಗ ಇಲ್ಲಿ ವಾಸಿಸುತ್ತಿದ್ದರು. ಉಳಿದವರು ಬೇರೆಡೆ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಸ್ಥಿಪಂಜರ ಸುಮಾರು 50 ವರ್ಷ ವಯಸ್ಸಿನವರಾಗಿರಬಹುದು. ಒಂಟಿಯಾಗಿದ್ದವರು ಅಥವಾ ಮಾನಸಿಕ ಅಸ್ವಸ್ಥರಾಗಿದ್ದವರು ಆಗಿರಬಹುದು. ಸತ್ತು ಕೆಲವು ವರ್ಷಗಳೇ ಕಳೆದಿವೆ, ಮೂಳೆಗಳು ಸಹ ಹಾಳಾಗಿವೆ. ನಮಗೆ ಯಾವುದೇ ರೀತಿಯ ಹೋರಾಟ ನಡೆದು ಸಾವನ್ನಪ್ಪಿದ ಲಕ್ಷಣಗಳು ಕಂಡುಬಂದಿಲ್ಲ. ಇದು ನೈಸರ್ಗಿಕ ಸಾವು ಆಗಿರಬಹುದು. ಹೆಚ್ಚಿನದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ