ದೆಹಲಿ: ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿಕೊಂಡರೆ ಮಹಾರಾಷ್ಟ್ರದ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ಗಳಿಂದ ಹೆಚ್ಚು ಮಾಲಿನ್ಯವಾಗಿದೆ ಎಂದು ಹೊಸ ಸಂಶೋಧನಾ ವರದಿ ಹೇಳಿದೆ. ಸಮುದ್ರ ತೀರದಲ್ಲಿರುವ ಪ್ಲಾಸ್ಟಿಕ್ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಇದಕ್ಕೆಲ್ಲ ಹೊಣೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಗೋವಾ ಮೂಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಷನೊಗ್ರಫಿ (ಎನ್‍ಐಒ) ಎನ್ನುವ ಸಂಸ್ಥೆ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳ ಮೌಲ್ಯಮಾಪನ ಹಾಗೂ ಸಮೃದ್ಧಿ, ವಿತರಣೆ, ಪಾಲಿಮರ್ ಪ್ರಕಾರ ಮತ್ತು ವಿಷತ್ವ ಎಂಬ ಶೀರ್ಷಿಕೆಯಡಿ ಅಧ್ಯಯನ ನಡೆಸಿದ್ದು, ಇದು ಕಳೆದ ವಾರ ನೆದರ್‍ಲ್ಯಾಂಡ್ ಮೂಲದ ಜರ್ನಲ್ ‘ಚೆಮೋಸ್ಫಿಯರ್’ ನಲ್ಲಿ ಪ್ರಕಟಿಸಲಾಗಿದೆ.
Advertisement
Advertisement
ಈ ಅಧ್ಯಯನದ ಪ್ರಕಾರ ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿದರೆ ಮಹಾರಾಷ್ಟ್ರದ ಕಡಲ ತೀರಗಳಲ್ಲಿ ಹೆಚ್ಚಿನ ಉಬ್ಬರವಿಳಿತದ ರೇಖೆಯಲ್ಲಿ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕಾರಕಗಳು ಹೆಚ್ಚು ಕಂಡುಬರುತ್ತವೆ ಎಂದು ಹೇಳಿದೆ. ಕಡಲ ತೀರದಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಗಳು, ಬಂದರು ಪ್ರದೇಶಗಳು, ಪೆಟ್ರೋಲಿಯಂ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಚಟುವಟಿಕೆಯಿಂದ ಮಹಾರಾಷ್ಟ್ರ ಕಡಲ ತೀರಗಳಲ್ಲಿ ಹೇರಳವಾಗಿ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳನ್ನು ಕಂಡು ಬರುತ್ತಿದೆ ಎಂದು ವರದಿ ಹೇಳಿದೆ.
Advertisement
ಸಂಶೋಧಕರು ಭಾರತದ ಪಶ್ಚಿಮ ಕರಾವಳಿಯ 10 ಕಡಲ ತೀರಗಳಲ್ಲಿ ಎರಡು ವರ್ಷಗಳ ಕಾಲ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಮೌಲ್ಯಮಾಪನ ಮತ್ತು ಸಮುದ್ರ ಜೀವಿಗಳ ಮೇಲೆ ಅವುಗಳ ವಿಷಕಾರಿ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದರು. ಈ ಕಡಲ ತೀರಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ಕಾರಕಗಳು ಬಿಳಿ, ತಿಳಿ ಹಳದಿ, ಗಾಢ ಕಂದು, ಹಸಿರು, ನೀಲಿ ಮತ್ತು ಕೆಂಪು ಮುಂತಾದ ವಿವಿಧ ಬಣ್ಣಗಳಲ್ಲಿ ಕಂಡು ಬಂದಿವೆ ಎಂದು ಎನ್‍ಐಒ ವಿಜ್ಞಾನಿಗಳಾದ ಡಾ.ಮಹುವಾ ಸಹಾ ಮತ್ತು ಡಾ. ದುಷ್ಮಂತ್ ಮಹಾರಾನ ನೇತೃತ್ವದ ಅಧ್ಯಯನ ತಿಳಿಸಿದೆ.
Advertisement
ಪ್ಲಾಸ್ಟಿಕ್ ಮಾಲಿನ್ಯಕಾರಕಗಳಿಂದ ಸಮುದ್ರ ಪರಿಸರಕ್ಕೆ ತೊಂದರೆಯಾಗದಂತೆ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ನಡೆಸುವುದರ ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್‍ನಿಂದ ದೂರವಿರಲು ಮತ್ತು ಅದರ ಮರುಬಳಕೆಯನ್ನು ಹೆಚ್ಚಿಸಲು ಸರ್ಕಾರದ ಚೌಕಟ್ಟಿನ ನೀತಿಗಳು ಅಗತ್ಯ ಎಂದು ಸಂಶೋಧಕರು ಸೂಚಿಸಿದ್ದಾರೆ.