DistrictsKarnatakaKoppalLatestMain Post

ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ ಆರ್ಟಿಕಲ್ 25 ಪ್ರತಿಪಾದಿಸುವ, ಭಾರತೀಯ ಜನತೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ಪ್ರತಿಯೊಬ್ಬ ಭಾರತೀಯನ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವ ಹುನ್ನಾರವಾಗಿದೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ – ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹುಜಾರ್ ಆಹೆಮದ್ ಆರೋಪಿಸಿದ್ದಾರೆ.

ಈ ಬಗ್ಗೆ ಪತಿಭಟನೆ ನಡೆಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‍ಡಿಪಿಐ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎನ್ನುವ ಆಕರ್ಷಕ ಹಣೆ ಪಟ್ಟಿ ಹೊಂದಿರುವ ಸದರಿ ಮಸೂದೆಯು, ಅಪ್ರಾಪ್ತ, ಅಸ್ವಸ್ಥ ಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎನ್ನುವ ಮೂಲಕ ದಲಿತ ಸಮುದಾಯವನ್ನು ಮಾನಸಿಕ ಅಸ್ವಸ್ಥರು, ಎನ್ನುವ ಮೂಲಕ ತುಂಬಾ ಅವಮಾನಕರವಾಗಿ ಬಿಂಬಿಸಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

ಅಕ್ರಮ ಮತಾಂತರ ನಡೆದಿದೆ ಎಂಬ ಆರೋಪವನ್ನು ಮಾಡಿ ಮತಾಂತರಗೊಂಡವರ ಬಂಧುಗಳು, ಸ್ನೇಹಿತರು ಹಾಗೂ ಪರಿಚಿತರ ಪೈಕಿ ಯಾರು ಬೇಕಾದರು ದೂರು ನೀಡಬಹುದು ಮತ್ತು ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆಯೂ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದೇ ಆಗಿರುತ್ತದೆ ಎನ್ನುವ ಮೂಲಕ ವೈಯಕ್ತಿಕ ದ್ವೇಷ, ಷಡ್ಯಂತ್ರ ಮತ್ತು ಅನ್ಯ ಕೋಮಿನವರ ನಾಶಕ್ಕೆ ಹಾಗೂ ಅವರನ್ನು ದುರುದ್ದೇಶಪೂರ್ವಕವಾಗಿ ತೊಂದರೆಗೆ ಸಿಲುಕಿಸುವ ಕೋಮುವಾದಿ ಧೋರಣೆಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

ಕೋಮು ಆಧಾರಿತ ಗಲಭೆಗಳಿಗೆ ಮತ್ತು ಅಶಾಂತಿಯ ವಾತಾವರಣಕ್ಕೆ ರಾಜ್ಯವನ್ನು ದೂಡಿ, ಇದನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ರಾಜಕೀಯ ಲಾಭಗಳಿಸುವುದು.ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ತಾರತಮ್ಯದಿಂದ ಮುಕ್ತಿ ಪಡೆಯದೆ ಮತ್ತದೇ ಜಾತಿವಾದದ ಕಪಿ ಮುಷ್ಟಿಯಲ್ಲಿ ನರಳಿ ಸಾಯುವಂತೆ ಮಾಡುವುದು. ಧರ್ಮ ನಿರಪೇಕ್ಷತೆಯನ್ನು ಪ್ರೋತ್ಸಾಹಿಸುವ ಅಂತರ್ ಧರ್ಮೀಯ ಮದುವೆಗಳನ್ನು ನಿರ್ಬಂಧಿಸುವುದು. ಮಹಿಳೆಯರ ಹಕ್ಕುಗಳನ್ನು ಕಸಿಯುವುದು. ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋಧಿಸುವುದು, ಸದರಿ ಕಾಯ್ದೆಯ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಂಡು ತೊಂದರೆ ಮಾಡುವುದು. ಅವರ ಆಸ್ತಿಗಳನ್ನು ಲಪಟಾಯಿಸಿ, ಆ ಮೂಲಕ ಅವರ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು. ಮಾನವ ಹಕ್ಕುಗಳ ಪ್ರತಿಪಾದಕರು, ಚಳುವಳಿಗರಾರರು, ಹೋರಾಟಗಾರರು ಸಾಹಿತಿಗಳನ್ನು ದಿಕ್ಕು ತಪ್ಪಿಸಿ, ಅವರ ಆದ್ಯತೆಗಳ ದಾರಿ ಬದಲಿಸಿ, ಭಾವನಾತ್ಮಕ ಇಂತಹ ಜಟಾಪಟಿಗಳಲ್ಲೇ ಮುಳುಗಿಸಿ ಅಗತ್ಯವಾದ ವಿಚಾರಗಳ ಸುತ್ತ ಹೋರಾಟಗಳು ನಡೆಯದಂತೆ ಈ ಕಾಯ್ದೆಯ ಮೂಲಕ ಹುನ್ನಾರ ನಡೆಸಲಾಗುತ್ತಿದೆ.

ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನೂ ಅವಿರತವಾಗಿ ನಡೆಸಿಕೊಂಡು ಬರುತ್ತಿರುವ ಹಲವು ಧಾರ್ಮಿಕ ಸಂಸ್ಥೆಗಳ ಮೇಲೆ ಈ ರೀತಿಯ ಭಯೋತ್ಪಾದನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸೇವಾ ಸಂಸ್ಥೆಗಳು ನಾಡಿನ ಶೋಷಿತ ಸಮುದಾಯಗಳಿಗೆ ನೀಡುತ್ತಿದ್ದ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತಿತರ ಸೇವೆಗಳನ್ನು ತಡೆಗಟ್ಟಿ ಶೋಷಣೆ ಮಾಡಲು ಹೊರಟಿದೆ. ಸದರಿ, ಮತಾಂತರ ನಿಷೇಧ ಕಾಯ್ದೆಯ ಮೂಲಕ ಸರ್ಕಾರವು, ಸಮಾಜದಲ್ಲಿ ಅಕ್ಷರಶಃ ಆತಂಕ, ಭಯ, ದಾಳಿಯ ವಾತಾವರಣ ಸೃಷ್ಟಿಸಿ ಧಾರ್ಮಿಕ ಹಕ್ಕಿನ ಸ್ವಾತಂತ್ರ್ಯವನ್ನು ಧಮನಿಸಿ ತನ್ನ ಕೋಮುವಾದಿ ಅಜೆಂಡಾವನ್ನು ಮೆರೆಯಲು ಹೊರಟಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಕಾಪಾಡಬೇಕಾದ ಮಹತ್ವದ ಅಧಿಕಾರ ಹೊಂದಿರುವ ರಾಜ್ಯಪಾಲರು, ಯಾವ ಕಾರಣಕ್ಕೂ ಈ ಮತಾಂತರ ನಿಷೇದ ಕಾಯ್ದೆ ಎಂಬ ಈ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಮಸೂದೆಗೆ ಅನುಮತಿ ನೀಡಬಾರದೆಂದು ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಮನಿಯಾರ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Back to top button