Bengaluru CityKarnatakaLatestMain Post

ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

ಬೆಂಗಳೂರು: ಕರ್ನಾಟಕ ಸರ್ಕಾರವು ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನ ವಿರೋಧಿಯು ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಕೃತ್ಯವೂ ಆಗಿದೆ ಎಂಬ ನಿಲುವನ್ನು ಎಸ್‍ಡಿಪಿಐ ಈಗಾಗಲೇ ಪ್ರಕಟಿಸಿದ್ದು, ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.

ಈ ಬಗ್ಗೆ ಧ್ವನಿ ಎತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಘನತೆವೆತ್ತ ರಾಜ್ಯಪಾಲರು ಈ ಮಸೂದೆಯನ್ನು ತಿರಸ್ಕರಿಸಬೇಕು ಎಂಬ ಒತ್ತಾಯದ ಮನವಿಗಳನ್ನು ರಾಜ್ಯದಾದ್ಯಂತ ನಡೆಸಲಾದ ಪ್ರತಿಭಟನೆಗಳ ಮೂಲಕ ಸಲ್ಲಿಸಲಾಗಿದೆ. ಯುವಜನರ ಧರ್ಮಾಂತರದ ವೈವಾಹಿಕ ಜೀವನದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯುವ ಮತ್ತು ಭಾರತದ ಪ್ರತಿಯೊಬ್ಬ ಪ್ರಜೆಯ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮತ್ತು ಇನ್ನೂ ಹತ್ತು ಹಲವು ಒತ್ತಾಯಗಳು ಮತ್ತು ಹೇರಿಕೆಗಳ ಮೂಲಕ ಜನತೆಯಲ್ಲಿ ಆತಂಕ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಲು ಕಾರಣವಾಗಿರುವ ಮತಾಂತರ ನಿಷೇಧ ಎಂಬ ಭಯೋತ್ಪಾದಕ ಕಾಯ್ದೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ, ಎಸ್‍ಡಿಪಿಐ ನಾಡಿನ ಸರ್ವ ಜನರ ಹಿತದೃಷ್ಟಿಯಿಂದ ಘನ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಸ್‍ಡಿಪಿಐ ತೀರ್ಮಾನಿಸಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

ಮತಾಂತರ ನಿಷೇಧ ಕಾಯ್ದೆಯು ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಬಂದಾಗ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕುಂಟು ನೆಪಗಳನ್ನು ಹೇಳದೇ, ಸಭೆಯನ್ನು ಬಹಿಷ್ಕರಿಸದೇ, ತನ್ನ ಎಲ್ಲಾ ಸದಸ್ಯರಿಗೂ ವಿಪ್ ಜಾರಿಗೊಳಿಸಿ ಮತಾಂತರ ನಿಷೇಧ ಕಾಯ್ದೆಯ ಚರ್ಚೆಯಲ್ಲಿ ಕಡ್ಡಾಯವಾಗಿ ಬಾಗವಹಿಸುವಂತೆ ನೋಡಿಕೊಳ್ಳಬೇಕು. ವಿಧಾನಸಭೆಯಲ್ಲಿ ಸದರಿ ಮಸೂದೆಯ ಕರಡನ್ನು ಮಂಡಿಸಿದಾಗ ಕಾಂಗ್ರೆಸ್‍ನ ಪ್ರಮುಖ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಹಾಜರಿರದೆ ಮಸೂದೆಯು ಮಂಡನೆಯಾದ ಮೇಲೆ ತಡವಾಗಿ ಸಭೆಗೆ ಆಗಮಿಸಿ, ನಮ್ಮಿಂದ ಮಸೂದೆಯನ್ನು ಮುಚ್ಚಿಟ್ಟು, ಚರ್ಚೆಗೆ ಅವಕಾಶ ನೀಡದೇ ಮಸೂದೆಯನ್ನು ಮಂಡಿಸಲಾಗಿದೆ ಎಂದು ತಕರಾರು ತೆಗೆದು ಮಾತನಾಡಿರುವ ಬಗ್ಗೆ ಎಸ್‍ಡಿಪಿಐ ಗಮನಿಸಿದೆ. ಇದು ತಪ್ಪು ಎಂದು ಅಭಿಪ್ರಯಾಪಟ್ಟಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸಿ ಕರಡು ಮಂಡನೆಯಾಗದಂತೆ ನೋಡಿಕೊಳ್ಳಬೇಕಾಗಿದ್ದು ವಿರೋಧ ಪಕ್ಷಗಳ ಜವಾಬ್ದಾರಿ ಆಗಿತ್ತು. ಈಗಲಾದರೂ ಮಸೂದೆಯು ವಿಧಾನ ಪರಿಷತ್ತಿಗೆ ಚರ್ಚೆಗೆ ಬಂದಾಗ, ಯಾವ ನೆಪವನ್ನೂ ಹೇಳದೇ ವಿರೋಧ ಪಕ್ಷದ ಸರ್ವ ಸದಸ್ಯರು ಖುದ್ದು ಹಾಜರಿದ್ದು ಮಸೂದೆಯನ್ನು ವಿರೋಧಿಸಿ, ಪರಿಷತ್ತಿನಲ್ಲಿ ತಿರಸ್ಕಾರವಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published.

Back to top button