ಶಿವಮೊಗ್ಗ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರಾಷ್ಟ್ರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದೀಗ ಛಾಯಾಚಿತ್ರ ಪ್ರದರ್ಶನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಶಿವಮೊಗ್ಗದ ಶಿವಪ್ಪನಾಯಕ ಮಾಲ್‍ನಲ್ಲಿ ಗೊಂದಲ ಏರ್ಪಟ್ಟಿತ್ತು. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಭಗತ್ ಸಿಂಗ್, ಸರ್ದಾರ್ ವಲ್ಲಭಬಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಅಂಬೇಡ್ಕರ್, ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಾಲ್‍ನಲ್ಲಿ ಛಾಯಾಚಿತ್ರ ಪ್ರದರ್ಶನ ಗಮನಿಸಿದ ಎಸ್‍ಡಿಪಿಐ ಕಾರ್ಯಕರ್ತರು ರೊಚ್ಚಿಗೆದ್ದು, ಫೋಟೋ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹಾಕುವಂತೆ ಆಗ್ರಹಿಸಿದರು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಎಸ್‍ಡಿಪಿಐ ಕಾರ್ಯಕರ್ತರ ವಿರುದ್ದ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಎಸ್‍ಡಿಪಿಐ ಕಾರ್ಯಕರ್ತರು ಅವಮಾನ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ
ಘಟನೆ ಬಳಿಕ ಎಚ್ಚೆತ್ತ ಮಾಲ್ ಸಿಬ್ಬಂದಿ ವೀರ ಸಾವರ್ಕರ್ ಭಾವಚಿತ್ರ ಮತ್ತೆ ಹಾಕುವುದರ ಜೊತೆಗೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಅಳವಡಿಸಿದರು. ಅಲ್ಲದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಕೆಲವು ಮುಸ್ಲಿಂ ಯುವಕರ ವಿರುದ್ದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಭಾವಚಿತ್ರದ ಗೊಂದಲ ಕೆಲಕಾಲ ಅಮೃತ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿಯಾಯಿತು.