-ಒಂದು ತಿಂಗಳು ಅವಕಾಶ ಕಲ್ಪಿಸಿದ ಜಿಲ್ಲಾಡಳಿತ
ಕಾರವಾರ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಯು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಆರಂಭವಾಗಿದೆ.
Advertisement
ಕೊರೊನಾ ಇಳಿಕೆಯಾದ ಕಾರಣ ಜಿಲ್ಲೆಯಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಗೆ ಅವಕಾಶ ಕಲ್ಪಿಸಿ ಕೊಡುವ ಜೊತೆಗೆ ಇದೀಗ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಪ್ರಾರಂಭವಾಗಿದ್ದ ಸ್ಕೂಬಾ ಡೈವ್‍ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಇದನ್ನೂ ಓದಿ: ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್
Advertisement
Advertisement
ಪಶ್ಚಿಮ ಕರಾವಳಿಯಲ್ಲಿ ಮೊದಲು ಪ್ರಾರಂಭ:
Advertisement
ಭಾರತದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವನ್ನು ಹೊರತುಪಡಿಸಿದರೆ ಎರಡನೇ ಮತ್ತು ಅತ್ಯಂತ ಸುರಕ್ಷತೆ ಇರುವ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೇತ್ರಾಣಿ ಅಡ್ವೆಂಚರ್ಸ್ 2009ರ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ಯಾಡಿ ನೋಂದಾಯಿತ ಡೈವ್ ಕೇಂದ್ರವಾಗಿದ್ದು, ಸ್ಕೂಬಾ ಡೈವರ್ ಗಳು ಮತ್ತು ಬೋಧಕರಿಗೆ ಮಹತ್ವಾಕಾಂಕ್ಷೆಯ ಡಿಸ್ಕವರ್ ಸ್ಕೂಬಾ ಡೈವ್ ಮತ್ತು ವೃತ್ತಿಪರ ಪ್ರಮಾಣೀಕರಣ ಕೋರ್ಸ್‍ಗಳನ್ನು ನೀಡುತ್ತದೆ. ಪ್ಯಾಡಿ ಜಾಗತಿಕ ಮಾನದಂಡಗಳ ಪ್ರಕಾರ ನೇತ್ರಾಣಿ ಅಡ್ವೆಂಚರ್ಸ್ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ಸ್ಕೂಬಾ ಡೈವಿಂಗ್ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ. ಆದರೇ ಇದೀಗ ಜಿಲ್ಲಾಡಳಿತ ಒಂದು ತಿಂಗಳು ಮಾತ್ರ ಸ್ಕೂಬಾ ಡೈವ್‍ಗೆ ಅವಕಾಶ ಮಾಡಿಕೊಟ್ಟಿದೆ.
ಏನಿದು ಸ್ಕೂಬಾ ಡೈವ್?ಹೇಗಿರುತ್ತೆ ಕಡಲಾಳದ ಸೌಂದರ್ಯ?
ಸಮುದ್ರದಾಳದಲ್ಲಿ ಇಳಿದು ಅಲ್ಲಿನ ಜೀವಚರಗಳನ್ನು ವೀಕ್ಷಿಸುವುದೇ ಸ್ಕೂಬಾ ಡೈವ್. ಇದಕ್ಕಾಗಿ ಆಕ್ಸಿಜನ್ ಸಿಲಿಂಡರ್ ತುಂಬಿದ ಪರಿಕರಗಳನ್ನು ಹಾಕಿಕೊಂಡು ಸಮುದ್ರದ ಮಧ್ಯಭಾಗದಲ್ಲಿ ಜಂಪ್ ಮಾಡುವ ಮೂಲಕ ಕಡಲಿನ ಆಳಕ್ಕೆ ಇಳಿಯಲಾಗುತ್ತದೆ. ಇದಕ್ಕಾಗಿ ಈಜು ಬರಬೇಕು ಎಂದೇನೂ ಇಲ್ಲ. ಆದರೇ ಧೈರ್ಯ ಬೇಕು. ಇನ್ನು ಸುರಕ್ಷತೆ ದೃಷ್ಟಿಯಿಂದ ನುರಿತ ತರಬೇತುದಾರರು ಸಹಾಯಕ್ಕೆ ಇರುತ್ತಾರೆ. ಉಸಿರಾಟದ ಸಾಧನ ಧರಿಸಿ ನೀರೊಳಗೆ ಮುಳುಗಿ ಹವಳಗಳನ್ನು ನೋಡುವ, ಮೀನಿನಂತೆ ಸಮುದ್ರದಲ್ಲಿ ಈಜಾಡಬೇಕು ಎನ್ನುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಆಸಕ್ತರಿಗೆ ಮಾರ್ಗದರ್ಶಕರು ತಿಳಿಸಿಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು, ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಪತಿ ಜೊತೆ ನಟಿಯ ಸ್ಕೂಬಾ ಡೈವಿಂಗ್
ನೇತ್ರಾಣಿ ದ್ವೀಪದಲ್ಲಿ ಹವಳದ ದಿಬ್ಬಗಳು, ಡಾಲ್ಫಿನ್‍ಗಳು, ವಿವಿಧ ಜಾತಿಯ ಆಮೆಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಓರ್ಕಾ ಮತ್ತು ತಿಮಿಂಗಿಲಗಳನ್ನೂ ಸಹ ಇಲ್ಲಿ ನೋಡಬಹುದಾಗಿದ್ದು ಅಪರೂಪದ ಜಲಚರಗಳ ಆಗರವಾಗಿದ್ದು ಇವುಗಳನ್ನು ಸಮುದ್ರದಾಳಕ್ಕೆ ಇಳಿದು ವೀಕ್ಷಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯ ಪಟ್ಟಣವಾದ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ ಇದನ್ನು ‘ಭಾರತದ ಡೈವಿಂಗ್‍ನ ಹೃದಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುವ ಪ್ರದೇಶವೂ ಇದಾಗಿದ್ದು, ಹಿಂದೆ ಈ ಭಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೇ ಜಿಲ್ಲಾಡಳಿತದ ದೂರ ದೃಷ್ಟಿಯಿಂದ ಇದೀಗ ಈ ಭಾಗದಲ್ಲಿ ಪ್ರವಾಸಿಗರಿಗೆ ತೆರಳಲು ಅವಕಾಶಗಳನ್ನು ನೀಡಿದೆ. ಇದನ್ನೂ ಓದಿ: ದುಬೈನಲ್ಲಿ ಸ್ಕೈ ಡೈವ್ ಮಾಡಿದ ನೀರಜ್
ತೆರಳುವುದು ಹೇಗೆ? ವ್ಯವಸ್ಥೆ ಏನು?
ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಪಶ್ವಿಮ ಕರಾವಳಿ ತೀರ ಪ್ರದೇಶವಾಗಿದೆ. ಬಸ್, ರೈಲು ಹಾಗೂ ವಿಮಾನದಲ್ಲಿ ಸಹ ಇಲ್ಲಿಗೆ ಬರಬಹುದಾಗಿದೆ. ಗೋಕರ್ಣದಿಂದ ಕೇವಲ 54 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ:
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣಕ್ಕೆ 153 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ವಿದೇಶದಲ್ಲಿರುವ ಕೆಲವು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ತಲುಪಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
ರೈಲಿನ ಮೂಲಕ:
ಮುರುಡೇಶ್ವರ ರೈಲು ನಿಲ್ದಾಣವು ಮಂಗಳೂರು ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಮಂಗಳೂರು ಪ್ರಮುಖ ರೈಲುಮಾರ್ಗವಾಗಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ರೈಲು ನಿಲ್ದಾಣವು ಪಟ್ಟಣದಿಂದ ಪೂರ್ವಕ್ಕೆ ಕೇವಲ 2 ಕಿ.ಮೀ ದೂರದಲ್ಲಿದೆ ಮತ್ತು ಬಸ್ಸುಗಳು ಮತ್ತು ಆಟೋರಿಕ್ಷಾಗಳ ಮೂಲಕ ತಲುಪಬಹುದಾಗಿದೆ.
ರಸ್ತೆ ಮಾರ್ಗ:
ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮುರುಡೇಶ್ವರನನ್ನು ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿಗೆ ಸಂಪರ್ಕಿಸುತ್ತವೆ. ಮುಂಬೈಯನ್ನು ಕೊಚ್ಚಿಗೆ ಸಂಪರ್ಕಿಸುವ ಎನ್‍ಎಚ್-17 ನಲ್ಲಿ ನೆಲೆಗೊಂಡಿರುವ ಸಾಮಾನ್ಯ ಬಸ್‍ಗಳು ಎರಡು ನಗರಗಳ ನಡುವೆ ನಿಯಮಿತವಾಗಿ ಚಲಿಸುತ್ತವೆ ಮತ್ತು ಮಂಗಳೂರಿನ ಮೂಲಕ ಹಾದು ಹೋಗುತ್ತವೆ. ಬೆಂಗಳೂರು ಈ ಪ್ರದೇಶದ ಇತರ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.
ವಸತಿ ವ್ಯವಸ್ಥೆ:
ಮುರಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾದ್ದರಿಂದ ವಸತಿ ವ್ಯವಸ್ಥೆ ಸಾಕಷ್ಟಿದೆ. ಖಾಸಗಿ ಲಾಡ್ಜ್‍ಗಳು, ಸರ್ಕಾರಿ ವಸತಿಗೃಹ ಹಾಗೂ ಹೋಮ್ ಸ್ಟೇಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿಗೆ ಬರುವವರು ಸ್ಕೂಬಾ ಡೈ ಜೊತೆಗೆ ಹೊನ್ನಾವರ ಭಾಗದ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಸೌಂದರ್ಯ ಸವಿಯುವ ಜೊತೆಗೆ ಕಾಂಡ್ಲ ವನದಲ್ಲಿ ವಾಕ್ ಸಹ ಮಾಡಬಹುದಾಗಿದ್ದು, ಪ್ರವಾಸಿಗರಿಗೆ ಅತೀ ಕಡಿಮೆ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ವ್ಯವಸ್ಥೆ ಮಾಡಿದೆ.